ಜಿಲ್ಲೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭದ್ರ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಈ ಸರ್ಕಾರ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಕೆಡುವಲು ವಿದೇಶದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಅಸ್ಥಿರಗೊಳಿಸಲು ಆಗಲ್ಲ.

ರಾಜ್ಯದಲ್ಲಿದ್ದುಕೊಂಡೇ ಏನನ್ನೂ ಮಾಡಲಾಗಲ್ಲ. ಇನ್ನು ವಿದೇಶದಲ್ಲಿ ಕುಳಿತು ಅಲ್ಲಾಡಿಸಲಾಗುತ್ತದಾ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. 136 ಸ್ಥಾನಗಳನ್ನು ಪಡೆದು ಭದ್ರವಾಗಿದ್ದು ಜನಪರ ಆಡಳಿತ ನೀಡುತ್ತಿದೆ.

ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಈಗಲೂ ನುಡಿದಂತೆ ನಡೆಯುತ್ತೇವೆ. ಐದು ವರ್ಷಗಳ ಕಲ ಸುಭದ್ರ ಆಡಳಿತ ನೀಡಲಿದ್ದೇವೆ ಎಂದರು.

ಇನ್ನು ವರ್ಗಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆಯ ಮಾಹಿತಿ ವಿದೇಶದಲ್ಲಿ ಕೊಟ್ಟರಂತಾ? ಸುಮ್ಮನೇ ಪೆನ್‌ಡ್ರೈವ್ ಇಟ್ಟುಕೊಂಡು ತಿರುಗಾಡೋದು…ಪೆನ್‌ಡ್ರೈವ್ ಇಲ್ಲಾ..ಏನೂ ಇಲ್ಲ.

ಈ ಹಿಂದೆ ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆಯೇ ಮಾಡಿಲ್ಲವಾ? ತಡೆಯಾಜ್ಞೆ ಆಗಿಲ್ಲವಾ? ಆಡಳಿತದ ದೃಷ್ಟಿಯಿಂದ ವರ್ಗಾವಣೆ ಸಹಜ. ಅದರಲ್ಲಿ ದಂಧೆ ಏನು ಬಂತು ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಜಾರಿಗೊಳಿಸಿದೆ. ಇನ್ನು ಆರು ತಿಂಗಳಲ್ಲಿ ಯುವ ನಿಧಿ ಕೂಡ ನೀಡಲಿದ್ದೇವೆ. ಈ ಹಿಂದೆ 2013-18ರಲ್ಲಿ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೀಡಿದ್ದ 620ರ ಪೈಕಿ ಕೇವಲ 50-60 ಭರವಸೆ ಮಾತ್ರ ಈಡೇರಿಸಿದೆ.

ಇನ್ನು ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ನುಡಿದಂತೆ ನಡೆಯಲಿಲ್ಲ. ಅಚ್ಚೆ ದಿನ್ ಬರಲೇ ಇಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದವರು ಮಾಡಲೇ ಇಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಹೇಳಿದವರು ಈವರೆಗೂ ಹಾಕಲಿಲ್ಲ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ 22 ಸಾವಿರ ಕೋಟಿ ಸಾಲಮನ್ನಾ ಮಾಡಿತು. ಪಡಿತರ ಚೀಟಿ ನೀಡಿತು. ವೃದ್ಧಾಪ್ಯ ವೇತನ ಸೇರಿದಂತೆ ಅನೇಕ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿತು ಎಂದು ತುಲನಾತ್ಮಕವಾಗಿ ವಿವರಿಸಿದರು.

ಇನ್ನು ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಈ ಹಿಂದಿನ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೀಸಲಾತಿ ಒಡೆದು ಶೇ. 4ರಷ್ಟು ಮೀಸಲಾತಿ ಪೈಕಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿತು. ಆದರೆ, ಅಂಥ ಯಾವುದೇ ಶಿಫಾರಸ್ಸು ಮಾಡಿಲ್ಲವೆಂದು ಹಿಂದುಳಿದ ವರ್ಗದ ಸಚಿವರೇ ಹೇಳಿದ್ದಾರೆ. ತಮ್ಮಲ್ಲಿ ಯಾವುದೇ ಶಿಫಾರಸ್ಸು ಬಂದಿಲ್ಲ ಎಂದಿದ್ದಾರೆ. ಹೀಗಾಗಿ ಇದೊಂದು ಗಿಮಿಕ್ ಅಷ್ಟೆ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.