ಜಿಲ್ಲೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರ: ಶಾಸಕ ಜಿ.ಟಿ.ದೇವೇಗೌಡ ಅಭಿಮತ

ಆರ್.ಕೃಷ್ಣ

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಕ್ಷೀಪ್ರಕ್ರಾಂತಿ ಏನು ನಡೆಯುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಬಡವರು ಸಂತೃಪ್ತಿಯಿಂದ ಎರಡು ಹೊತ್ತು ಊಟ ಮಾಡಿದರೆ ಅದೇ ನನ್ನನ್ನು ಕಾಪಾಡಲಿದೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರಿಂದ ಮುಖ್ಯಮಂತ್ರಿಯಾದ ತಕ್ಷಣವೇ ಅನ್ನಭಾಗ್ಯ ಜಾರಿಗೆ ತಂದರು. ಅವರು ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಅದಕ್ಕೆ ಅನ್ನಭಾಗ್ಯ ಕಾರಣ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತ್ತೊಮ್ಮೆ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು.

ಯಾರನ್ನು, ಯಾವುದಕ್ಕೂ ಲೆಕ್ಕಸದೇ ಸಿದ್ದರಾಮಯ್ಯ ಅವರು ಬಡವರ ಪರ ನಿಂತ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಜನರು ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಗಟ್ಟಿಯಾಗಿದೆ ಎಂದರು.

ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಯಾವತ್ತು ಅದೃಷ್ಟ ಒಲಿದು ಬರುತ್ತದೋ ಅವತ್ತು ಮುಖ್ಯಮಂತ್ರಿ ಆಗುತ್ತಾರೆ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ನನಗೆ ಬೇರೆ ಯಾವುದೇ ವಿಚಾರ ಗೊತ್ತಿಲ್ಲ ಹೇಳಿದರು.

ಬಜೆಟ್ ಸಿದ್ಧತೆ ಆರಂಭವಾಗಿದೆ. ನನ್ನ ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳು, ಕುಡಿಯುವ ನೀರು, ಮುಡಾದಿಂದ ಏಕಕಾಲಕ್ಕೆ 900 ಖಾಸಗಿ ಹಾಗೂ ಮುಡಾ ಬಡಾವಣೆಗಳನ್ನ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದ್ದರಿಂದ ಅವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಭೆ ನಡೆಸಲಾಗುತ್ತಿದೆ ಎಂದರು.

ಕಾವೇರಿಯಿಂದ ಉಂಡವಾಡಿ, ಹುಲ್ಲಹಳ್ಳಿ ಬಳಿ ಕಬಿನಿಯಿಂದ ಪಟ್ಟಣಕ್ಕೆ ನೀರು ತರುವ ಯೊಜನೆ, ಯುಜಿಡಿ ಸಮಸ್ಯೆ ಸರಿಪಡಿಸಲು ಅನುದಾನದ ಜತೆಗೆ ಗ್ರೇಟರ್ ಮೈಸೂರು ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನು ಆರು ತಿಂಗಳಲ್ಲಿ ಗ್ರೇಟರ್ ಮೈಸೂರು ಘೋಷಣೆ ಮಾಡಿ, ಒಂದು ವರ್ಷದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮೈಸೂರಿನ ಮೂರು ಕ್ಷೇತ್ರಗಳು ನಗರ ವ್ಯಾಪ್ತಿಯಲ್ಲಿದ್ದರೆ ಚಾಮುಂಡೇಶ್ವರಿ ಕ್ಷೇತ್ರ ಹೊರ ವಲಯ, ಗ್ರಾಮೀಣ ಭಾಗವನ್ನು ಒಳಗೊಂಡಿದೆ. ಹಾಗಾಗಿ, ಸಮಸ್ಯೆ ಹೆಚ್ಚಿದ್ದು ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈಗ ರಾಜಕಿಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದೆ. ಮುಂದೆ ಚುನಾವಣೆ ಬಂದಾಗ ಯಾವ ಪಕ್ಷ ಪರ ಪ್ರಚಾರ ಮಾಡುತ್ತೇನೆ ಎನ್ನುವುದನ್ನು ನೋಡೋಣ ಎಂದು ಪ್ರಶ್ನೆಗೆ ಉತ್ತರಿಸಿದರು.