ಹುಬ್ಬಳ್ಳಿ :ಕಾಂಗ್ರೆಸ್ ಪಕ್ಷ ನಾಮಕಾವಸ್ತೆ ಎನ್ನುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದು, ಅವರನ್ನು ತನ್ನ ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದರೂ ಖರ್ಗೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೆಸರಿಗಷ್ಟೇ ಅಧಿಕಾರ ನೀಡಿದೆ. ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಈಗ ಖರ್ಗೆ ಅವರ ಪರಿಸ್ಥಿತಿ ಒಂದೇ ಆಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದೆ. ನಮಗೇನೂ ಗೊತ್ತಾಗುವುದಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಕಾಂಗ್ರೆಸ್ ಪಕ್ಷ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ನಿದರ್ಶನ ಮತ್ತು ಕಾಂಗ್ರೆಸ್ನಲ್ಲಿ ಹಿರಿಯ ರಾಜಕಾರಣಿಗಳಿಗೆ ಬೆಲೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ತೇಪೆ ಹಚ್ಚಲು ಬಂದಿದ್ದಾರೆ: ಕಾಂಗ್ರೆಸ್ನ ಒಬ್ಬೊಬ್ಬರೇ ಶಾಸಕರು ಅಸಮಾಧಾನಗೊಂಡು, ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹೀಗಾಗಿ ಸುರ್ಜೆವಾಲಾ ಶಾಸಕರ ಅಸಮಾಧಾನಕ್ಕೆ ತೇಪೆ ಹಚ್ಚಲು ಬಂದಿದ್ದಾರೆ ಎಂದು ಜೋಶಿ ಆರೋಪಿಸಿದರು.