ಹುಬ್ಬಳ್ಳಿ : ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮದ ಮೂಲಕ ಬಡವರಿಗೆ ಭೂಮಿ ಕೊಟ್ಟವರೇ ಕಾಂಗ್ರೆಸ್ನವರು. ಅಂತಹದರಲ್ಲಿ ಬಡವರ ಭೂಮಿಯನ್ನು ಕಿತ್ತುಕೊಳ್ಳಲು ಸಾಧ್ಯವೇ ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಜಮೀನುದಾರರ ಪರವಾಗಿ ನಿಲ್ಲುವ ಮೂಲಕವಿರೋಧಿಸಿದ್ದು ಇದೇ ಬಿಜೆಪಿಯವರು ಎಂದು ದೂರಿದರು.
ವಕ್ಪ್ ವಿಚಾರದಲ್ಲಿ ಎಲ್ಲ ಸರ್ಕಾರಗಳು ನೋಟಿಸ್ ಕೊಟ್ಟಿವೆ. ಇದರ ಬಗ್ಗೆ ಬಿಜೆಪಿಯವರು ಚರ್ಚೆ ಮಾಡುತ್ತಾರಾ ? ವಕ್ಪ್ ಅನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಅವರು ಯಶಸ್ಸು ಕಾಣುತ್ತಿಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಈಗ ಅಪ್ರಸ್ತುತ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಸಿಎಂ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುತ್ತೇವೆ. ಆದರೆ, ಪ್ರತಿಪಕ್ಷಗಳು ವಿರೋಧ ಮಾಡದೇ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಅಭಿವೃದ್ಧಿ ಬಗ್ಗೆ ಚರ್ಚೆಗಳಾಗಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಪ್ರತಿಪಕ್ಷ ನಾಯಕರು ಚರ್ಚೆ ಮಾಡಲು ಬಿಡುವುದೇ ಇಲ್ಲ ಎಂದು ದೂರಿದರು.