ಮಂಡ್ಯ: ಪ್ರತಿಷ್ಠಿತ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದ ಚುನಾವಣೆಯಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ. ಇದರೊಂದಿಗೆ ಜೆಡಿಎಸ್, ಬಿಜೆಪಿಗೆ ಮರ್ಮಾಘಾತ ಅನುಭವಿಸುವಂತಾಗಿದೆ. ಮುಖ್ಯವಾಗಿ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪ್ರತಿಷ್ಠೆಯಾಗಿದ್ದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಅಂತೆಯೇ ಬಂಡಾಯ, ಅಸಮಾಧಾನ, ಒಳಬೇಗುದಿ ಸರಿಪಡಿಸಿಕೊಳ್ಳಲಾಗದೇ ಚುನಾವಣೆಗೆ ಧುಮುಕಿದ ಮೈತ್ರಿ ಸೋಲು ಕಾಣುವಂತಾಯಿತು.
ಗದ್ದುಗೆ ಉಳಿಸಿಕೊಂಡ ಕಾಂಗ್ರೆಸ್: 12 ಸ್ಥಾನದ ಆಯ್ಕೆಗೆ ನಗರದ ಮೈಷುಗರ್ ಪ್ರೌಢಶಾಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಮಂಡ್ಯ ತಾಲೂಕಿನಿಂದ ಹಾಲಿ ನಿರ್ದೇಶಕರಾಗಿದ್ದ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್ ಮರು ಆಯ್ಕೆಯಾದರು. ಇದರಿಂದಾಗಿ ಈ ಲಿತಾಂಶ ನಿರೀಕ್ಷೆಯಂತೆ ಬಂದಿದೆ. ಇನ್ನು ಪಾಂಡವಪುರ ತಾಲೂಕಿನಿಂದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹೋದರನ ಮಗ ಶಿವಕುಮಾರ್ ಗೆಲುವು ಸಾಧಿಸುವುದರೊಂದಿಗೆ ಸಹಕಾರ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಹಾಲಿ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸೋಲು ಕಂಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೋರೇಗೌಡ ಅವರ ಗೆಲುವಿನ ಯಾತ್ರೆ ಮುಂದುವರೆದಿದ್ದು, ಬರೋಬರಿ ಐದನೇ ಬಾರಿಗೆ ಜಯ ಸಾಧಿಸಿದ್ದಾರೆ. ನಾಗಮಂಗಲ ತಾಲೂಕಿನಲ್ಲಿ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಹಾಲಿ ನಿರ್ದೇಶಕ ಲಕ್ಷ್ಮೀ ನಾರಾಯಣ ಜಯಭೇರಿ ಬಾರಿಸಿದ್ದಾರೆ. ಇನ್ನು ಮದ್ದೂರು ತಾಲೂಕಿನ ಎರಡು ಸ್ಥಾನ, ಕೆ.ಆರ್.ಪೇಟೆ ತಾಲೂಕಿನ ಎರಡು ಸ್ಥಾನ ಹಾಗೂ ಮಳವಳ್ಳಿ ತಾಲೂಕಿನ ಒಂದು ಸ್ಥಾನಕ್ಕೆ ಮತದಾನ ನಡೆದು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದರೆ ಈ ಮೂರು ತಾಲೂಕಿನಲ್ಲಿ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಜಿಲ್ಲಾಡಳಿತ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಿಲ್ಲ. ನ್ಯಾಯಾಲಯಕ್ಕೆ ಲಿತಾಂಶದ ವರದಿ ಸಲ್ಲಿಸಲಿದೆ. ಅಲ್ಲಿ ನೀಡುವ ಆದೇಶದ ಮೇರೆಗೆ ಘೋಷಣೆಯಾಗಲಿದೆ.
ಒಟ್ಟಾರೆ ಅಧಿಕೃತವಾಗಿ ಏಳು ಸ್ಥಾನದ ಫಲಿತಾಂಶ ಘೋಷಣೆಯಾಗಿದೆ. ಅದರಂತೆ ನಾಲ್ಕು ಜನರು ಕಾಂಗ್ರೆಸ್ ಬೆಂಬಲಿತರು ಅಂದರೆ ನಾಗಮಂಗಲದ ಇಬ್ಬರು, ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕಿನಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಉಳಿದಂತೆ ಮಂಡ್ಯ ತಾಲೂಕಿನ ಇಬ್ಬರು ಹಾಗೂ ಪಾಂಡವಪುರದಲ್ಲಿ ಒಬ್ಬರು ಜೆಡಿಎಸ್ ಬೆಂಬಲಿತರು ಚುನಾಯಿತರಾಗಿದ್ದಾರೆ. ಇನ್ನು ಉಳಿದ ಮೂರು ತಾಲೂಕಿನ ಲಿತಾಂಶದಲ್ಲಿ ಐದು ಸ್ಥಾನದ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಬಹುದೆನ್ನುವ ನಿರೀಕ್ಷೆ ಇದೆ. ರಾಜ್ಯಸರ್ಕಾರದ ನಾಮನಿರ್ದೇಶನದ ಅವಕಾಶವಿರುವುದರಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ.
ಅಪ್ಪಾಜಿಗೌಡರನ್ನು ಗೆಲ್ಲಿಸಿಕೊಂಡ ಚಲುವರಾಯಸ್ವಾಮಿ: ಮನ್‌ಮುಲ್ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ ತಾಲೂಕು ನಾಗಮಂಗಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸ್ವಕ್ಷೇತ್ರವಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಜತೆಗೆ ಪ್ರತಿಷ್ಠೆಯೂ ಆಗಿತ್ತು. ಮಾತ್ರವಲ್ಲದೆ ತಮ್ಮನ್ನು ನಂಬಿಕೊಂಡು ಕಾಂಗ್ರೆಸ್ ಸೇರಿದ್ದ ಎನ್.ಅಪ್ಪಾಜಿಗೌಡ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.
ಹಿಂದೆ ಚಲುವರಾಯಸ್ವಾಮಿ ಮತ್ತು ಅಪ್ಪಾಜಿಗೌಡ ಜೆಡಿಎಸ್‌ನಲ್ಲಿದ್ದರು. ಆ ವೇಳೆ ಅಪ್ಪಾಜಿಗೌಡ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಸಿಆರ್‌ಎಸ್ ಯಶಸ್ವಿಯಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಚಲುವರಾಯಸ್ವಾಮಿ ಕಾಂಗ್ರೆಸ್ ಸೇರಿದರೂ ಅಪ್ಪಾಜಿಗೌಡ ಜೆಡಿಎಸ್‌ನಲ್ಲಿಯೇ ಉಳಿದುಕೊಂಡರು. ಆದರೆ ಮುಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಪ್ಪಾಜಿಗೌಡ ಸೋಲು ಅನುಭವಿಸಿದರು. ಇದಾದ ಬಳಿಕ ಜೆಡಿಎಸ್‌ನಲ್ಲಿನ ಒಳಜಗಳದಿಂದ ಬೇಸತ್ತು ಕಾಂಗ್ರೆಸ್ ಸೇರಿದರು.
ಈಗ ಸಿಆರ್‌ಎಸ್ ಮಾರ್ಗದರ್ಶನದಲ್ಲಿ ಮನ್‌ಮುಲ್ ಚುನಾವಣಾ ಅಖಾಡ ಪ್ರವೇಶಿದರು. ನಿರೀಕ್ಷೆಯಂತೆ ಅತಿ ಹೆಚ್ಚಿನ ಅಂದರೆ 170 ಮತ ಗಳಿಸುವುದರೊಂದಿಗೆ ಭರ್ಜರಿ ಗೆಲುವು ಸಾಧಿಸಿದರು. ಈ ಬಗ್ಗೆ ಮಾತನಾಡಿರುವ ಅಪ್ಪಾಜಿಗೌಡ, ಚಲುವರಾಯಸ್ವಾಮಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಬಹುಮತವಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆರುವ ಸಾಧ್ಯತೆ ಇದೆ. ಮತ್ತೊಂದೆಡೆ ಕೆಎಂಎ್ ಪ್ರತಿನಿಧಿಯಾಗಿ ಆಯ್ಕೆಯಾಗುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ನಿಚ್ಚಳವಾಗಿದೆ.
ಅಧ್ಯಕ್ಷ ಸ್ಥಾನ ಯಾರಿಗೆ?: ಸ್ಪಷ್ಟ ಬಹುಮತವಿರುವುದರಿಂದ ಕಾಂಗ್ರೆಸ್ ಅಧಿಕಾರಕ್ಕೇರುವುದು ಬಹುತೇಕ ಖಚಿತ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿರುವುದರಿಂದ ಶ್ರೀರಂಗಪಟ್ಟಣದ ಬೋರೇಗೌಡ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆಯೇ?, ಎರಡನೇ ಬಾರಿ ಆಯ್ಕೆಯಾಗಿರುವ ಮಂಡ್ಯ ತಾಲೂಕಿನ ಯು.ಸಿ.ಶಿವಕುಮಾರ್‌ಗೆ ಅಧ್ಯಕ್ಷಗಾದಿ ಒಲಿದು ಬರಲಿದೆಯೇ?. ನಾಗಮಂಗಲದ ಅಪ್ಪಾಜಿಗೌಡ ಅವರಿಗೆ ಅವಕಾಶ ಕೊಡಲಾಗುತ್ತದೆಯೇ ಎನ್ನುವುದು ಕುತೂಹಲ ಮೂಡಿಸಿದೆ. ಇದರೊಟ್ಟಿಗೆ ಉಳಿದ ಮೂರು ತಾಲೂಕಿನ ಲಿತಾಂಶ ೋಷಣೆ ಬಳಿಕ ಏನೆಲ್ಲ ಬದಲಾವಣೆಯಾಗಬಹುದು ಎನ್ನುವುದನ್ನು ಕಾದುನೋಡಬೇಕಿದೆ.
ಭಿನ್ನಮತಕ್ಕೆ ಪೆಟ್ಟು ತಿಂದ ಮೈತ್ರಿ: ಚುನಾವಣೆಯಲ್ಲಿ ಮೈತ್ರಿಗೆ ದೊಡ್ಡ ಹೊಡೆತ ಬಿದ್ದಿದೆ. ಕಾರಣ, ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಭಿನ್ನಮತ ಶಮನಗೊಳಿಸಿ ಚುನಾವಣೆ ಎದುರಿಸದಿರುವುದು. ಮದ್ದೂರು, ಕೆ.ಆರ್.ಪೇಟೆ ತಾಲೂಕಿನಲ್ಲಿ ಜಗಳ ಬೀದಿಗೆ ಬಂದರೂ ಸರಿಪಡಿಸುವ ಕೆಲಸವಾಗಲಿಲ್ಲ.