NIKHIL KUMARASWAMY 
ಜಿಲ್ಲೆ

ಜಿಪಂ. ತಾಪಂ ಚುನಾವಣೆ ನಡೆಸಲು ಕಾಂಗ್ರೆಸ್‌ಗೆ ಮನಸ್ಸಿಲ್ಲ- ನಿಖಿಲ್

ರಾಯಚೂರು ಜಿಪಂ,ತಾಪಂ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಮನಸ್ಸು ಮಾಡುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಕೋರ್ಟ್ ಛಿಮಾರಿ ಹಾಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷವು ಬಿಜೆಪಿ ಜತೆ ಕೈ ಜೋಡಿಸಿದೆ ಆದರೆ ಪಕ್ಷದ ಸಿದ್ದಂತಾವನ್ನು ಮಾರಾಟಕಿಟ್ಟಿಲ್ಲ. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸುವ ವಿಚಾರವನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಸ್ಥಳೀಯ ಚುನಾವಣೆಗಳು ಕಾರ್ಯಕರ್ತರ ಮೇಲೆ ಅವಲಂಬಿತಗೊಂಡಿರುತ್ತವೆ. ಅವರನ್ನು ಬೆನ್ನುತಟ್ಟಲು ಪ್ರವಾಸವನ್ನು ರಾಜ್ಯಾದ್ಯಂತ ಕೈಗೊಂಡಿದ್ದೇನೆ. ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಡಿಸೆಂಬರ್‌ನಲ್ಲಿ ಸ್ಥಳೀಯ ಚುನಾವಣೆಗಳು ಬರುತ್ತಿವೆ.

6 ರಿಂದ 7 ಬಾರಿ ಗೆದ್ದ ಕಾಂಗ್ರೆಸ್ ಶಾಸಕರೇ ಅನುದಾನವಿಲ್ಲದೆ ಅಳಲು ತೋಡಿಕೊಳ್ಳುತ್ತಿದ್ದಾರೆ, ಜನರಿಗೆ ನಾವು ಮುಖ ತೋರಿಸಲು ಆಗುತ್ತಿಲ್ಲ. ಒಂದು ರಸ್ತೆ ಚರಂಡಿ ನಿರ್ಮಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ವೈದ್ಯರಿಗೆ ವೇತನ ಕೊಡಲು ಆಗದಂಥ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಈ ಸರ್ಕಾರದಲ್ಲಿ ನಮ್ಮ ಶಾಸಕರು ವೈಯಕ್ತಿಕವಾಗಿ ಯಾವುದೇ ಅನುದಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ಕ್ಷೇತದ ಜನರಿಗೆ ಕೈಲಾದ ಸೇವೆ ಮಾಡಬೇಕು ಎಂದು ಶ್ರಮಿಸುತ್ತಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದು ಯೋಜನೆಯನ್ನು ಪಡೆಯಲು ಬ್ರೋಕರ್‌ಗಳನ್ನು ಅವಲಂಬಿಸಬೇಕಿದೆ. ಡೀಲರ್ಸ್‌ಗಳ ನೆಟ್‌ವರ್ಕ್ ಇದೆ. ನೇರವಾಗಿ ಯಾವುದೇ ಕೆಲಸ ಮಾಡಲು ಆಗುವುದಿಲ್ಲ ಮಂತ್ರಿಗಳು ಸೇರಿದಂತೆ ಹಲವರು ಇದಕ್ಕೆ ಪಾಲುದಾರರಾಗಿದ್ದಾರೆ. ವಸತಿ ಇಲಾಖೆಯಲ್ಲಿ ಆಡಳಿತ ಪಕ್ಷದ ಶಾಸಕರೇ ಹೋಗಿ ವಸತಿ ಯೋಜನೆಯನ್ನು ಕೇಳಿದರೇ ಕೊಡುವವರಿಲ್ಲ. ಮಂತ್ರಿಗಳನ್ನು ಕೇಳಿದರೆ ಕ್ಯಾರೇ ಎನ್ನುವುದಿಲ್ಲ. ಆಯಾ ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರು ಹೋಗಿ ಬ್ರೋಕರ್‌ಗಳನ್ನು ಹಿಡಿದು ಕೆಲಸ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆಂದು ಟೀಕಿಸಿದರು.

ಜನರೊಂದಿಗೆ ಜನತಾದಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಸದಸ್ಯತ್ವ ನೊಂದಣಿ ಮಾಡಲು ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬಂದಿದ್ದು, ನೊಂದಣಿ ಪ್ರಕ್ರಿಯೆಯೂ ನಡೆದಿದೆ. ತುಮಕೂರು ಜಿಲ್ಲೆಯಿಂದ ಪ್ರವಾಸ ಆರಂಭಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ರಾಯಚೂರು ಜಿಲ್ಲೆಗೆ ಪ್ರವಾಸ ನಡೆಸಲಾಗುತ್ತಿದೆ. ಕಳೆದ 3 ವರ್ಷಗಳಿಂದಲೂ ಏಮ್ಸ್ ಹೋರಾಟ ನಡೆಯುತ್ತಿದೆ. ನಿಯೋಗ ಕರೆದುಕೊಂಡು ಹೋಗಲಾಗುವುದು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗುತ್ತದೆ. ಏಮ್ಸ್ ತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಹನಮಂತಪ್ಪ ಅಲ್ಕೋಡ್, ಮಹಾಂತೇಶ ಪಾಟೀಲ್ ಅತ್ತನೂರು, ನೇಮಿಚಂದ್ರಪ್ಪ, ಲಕ್ಷ್ಮೀಪತಿ ಗಾಣದಾಳ, ದೇವೇಂದ್ರರೆಡ್ಡಿ ಸರ್ಜಾಪೂರ, ಸಣ್ಣ ನರಸಿಂಹ ನಾಯಕ, ಎನ್.ಶಿವಶಂಕರ, ಬಿ.ತಿಮ್ಮಾರೆಡ್ಡಿ,

ರಾಮಕೃಷ್ಣ ಇದ್ದರು.