ಜಿಲ್ಲೆ

ಸಿಎಂ, ಪಿಎಂ ಆಗಿದ್ದೇ ಕಾಂಗ್ರೆಸ್ ಬೆಂಬಲದಿಂದ: ಎಚ್‌ಡಿಕೆ, ಎಚ್‌ಡಿಡಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ವ್ಯಂಗ್ಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹಾಗೂ ಎಚ್.ಡಿ.ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.

ಬೆಳಗಾವಿಯ ಎಐಸಿಸಿ ಅಧಿವೇಶನದಲ್ಲಿ ನಕಲಿ ಗಾಂಧಿಗಳೇ ರಾರಾಜಿಸುತ್ತಿದ್ದಾರೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಾಲಿಶ ಹೇಳಿಕೆ ನೀಡಿರುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ನಾವು ಎಲ್ಲಿಯೂ ಮಹಾತ್ಮಗಾಂಧಿಯವರನ್ನು ಓಲೈಕೆ ಮಾಡಿಲ್ಲ. ಆದರೆ, ಕುಮಾರಸ್ವಾಮಿ ಅವರು ಈ ಬಗ್ಗೆ ಟೀಕಿಸುತ್ತಿರುವುದು ವಿಷಾದನೀಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಪಾರ ಜ್ಞಾನ ಹೊಂದಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರು ಹೆಬ್ಬೆಟ್ಟೇ ಎಂದು ಪ್ರಶ್ನಿಸಿದ ಅವರು, ಅವರಷ್ಟು ಜ್ಞಾನವನ್ನು ಹೊಂದಿಲ್ಲ. ಅಂತಹ ವ್ಯಕ್ತಿಯನ್ನು ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ.

ನಿಖಿಲ್‌ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲುಂಡರು, ಚನ್ನಪಟ್ಟಣದಲ್ಲಿ ಸೋಲಿನ ನಂತರ ಮನನೊಂದು ಹತಾಶರಾಗಿ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರದ ಸಮರ್ಥ ಸಚಿವರ ವಿರುದ್ಧ ಇಂತಹ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸಚಿವರಾಗಿ ತಮ್ಮ ಜವಾಬ್ದಾರಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ದಿನಗಳಲ್ಲಿ ರಾಜಕಾರಣದಲ್ಲಿ ಕಟ್ ಆ್ಯಂಡ್ ಪೇಸ್ಟ್ ರಾಜಕೀಯ ಪ್ರಾರಂಭವಾಗಿದೆ. ಭಾವನಾತ್ಮಕ ಮಾತುಗಳನ್ನಾಡಿ ಪ್ರಚೋದಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದ ಅವರು, ದೇವೇಗೌಡರು ನಾಡು ಕಟ್ಟಿದ ಕೆಂಪೇಗೌಡರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಅವರ ಚಿಂತನೆಯನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಉಳ್ಳವರು, ಸಿರಿವಂತರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದೆ. ಇದನ್ನು ಬಿಟ್ಟು ಬಡವರ 72 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ರಾಜ್ಯ ಸರ್ಕಾರದ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಮೊದಲು ರೈತರ ಸಾಲ ಮನ್ನಾ ಮಾಡಿಸಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ಥಾಪಿಸಿರುವ ತಮ್ಮ ಸ್ವಂತ ಶಾಲೆಗೆ ಸರ್ಕಾರಿ ಹಣವನ್ನು ಬಳಸಿಕೊಂಡಂತೆ ನಮ್ಮ ಕಾಂಗ್ರೆಸ್ ನಾಯಕರು, ಶಾಸಕರು ಬಳಸಿಕೊಂಡಿಲ್ಲ. ಇಂತಹ ವ್ಯಕ್ತಿ ಅಭಿವೃದ್ಧಿ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ನಗರಸಭಾ ಸದಸ್ಯ ಶ್ರೀಧರ್, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮೀ ರಘುನಂದನ್, ಮುಖಂಡರಾದ ಅಪ್ಪಾಜಿ, ಸಿ.ಆರ್.ರಮೇಶ್, ಶಿವಲಿಂಗು, ನಾಗರಾಜು, ಸಿ.ಎಂ.ದ್ಯಾವಪ್ಪ ಇದ್ದರು..