ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ 
ಜಿಲ್ಲೆ

ಚಕ್ರವರ್ತಿ ಸೂಲಿಬೆಲೆ ಬಹಿರಂಗ ಕ್ಷಮೆಗೆ ಕಾಂಗ್ರೆಸ್ ಒತ್ತಾಯ

ಶಿವಮೊಗ್ಗ: ಮಲೆನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಆದರೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಇಲ್ಲಿ ವಿಷದ ಬೀಜ ಬಿತ್ತುತ್ತಿದ್ದಾರೆ. ದ್ವೇಷ ರಾಜಕಾರಣ ಬೆಳೆಯುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಸೌಗಂಧಿಕಾ ರಘುನಾಥ ಅವರ ವಿರುದ್ಧ ಅಸಂಬದ್ಧ ಪದಬಳಕೆ ಮಾಡಿದ್ದಾರೆ. ಅಲ್ಲದೆ, ಒಬ್ಬ ಹೆಣ್ಣು ಮಗಳೆಂದು ಗೌರವ ಕೊಡದೇ ಉದ್ಧಟತನ ಮೆರೆಯುತ್ತಿದ್ದಾರೆ. ತಕ್ಷಣವೇ ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೀಳುಮಟ್ಟದ ಹೇಳಿಕೆ ನೀಡಿದ ಹೊರತಾಗಿಯೂ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಗೆಗೇಡಿನ ಸಂಗತಿಯಾಗಿದೆ. ಸುಳ್ಳು ಹೇಳುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಬೇರೆ ಬೇರೆ ಖಾತೆಗಳಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ಮಹಿಳೆಯರ ಬಗ್ಗೆ ಗೌರವ ಹೊಂದಿದ್ದರೆ ಕ್ಷಮೆ ಕೇಳಬೇಕು. ಗೌರವ ಕೊಡದವರು ಈ ರಾಜ್ಯ ಮತ್ತು ದೇಶದಲ್ಲೇ ಬಾಳಲು ಯೋಗ್ಯರಲ್ಲ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಈ ಘಟನೆ ಮೂಲಕ ನಮ್ಮ ನಮ್ಮಲ್ಲೇ ವೈಮನಸ್ಸು ತಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಠಾಣೆಗೆ ಹಾಜರಾಗಿದ್ದ ಅವರು ಸ್ಟೇಷನ್ ಬೇಲ್ ಪಡೆದು ಹೊರಬಂದಿದ್ದಾರೆ. ಆನಂತರ ಅವರು ನೀಡಿದ ಹೇಳಿಕೆ ಸಹಿಸುವಂತದ್ದಲ್ಲ. ಮಹಿಳೆ, ಭಾರತೀಯ ಸಂಸ್ಕೃತಿ ಕುರಿತು ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡುತ್ತಾರೆ. ಆದರೆ ಮಹಿಳೆಯ ನಿಂದನೆ ಮಾಡುತ್ತಿರುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ ಅವರು, ಪ್ರಕರಣ ಸಂಬಂಧ ಆಗಾಗ ಹೇಳಿಕೆಗಳನ್ನು ತಿರುಚುತ್ತಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಸೌರ್ಹಾದ ವಾತಾವರಣವಿದೆ. ಚಕ್ರವರ್ತಿ ಸೂಲಿಬೆಲೆ ಇಲ್ಲಿ ವಿಷ ಬೀಜ ಬಿತ್ತಿವುದು ಬೇಡ ಎಂದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಸಿ.ಎಸ್.ಚಂದ್ರಭೂಪಾಲ್, ಕರೀಂ ಪಾಶ, ಶಿವಾನಂದ್, ಸೌಗಂಧಿಕಾ ರಘುನಾಥ, ಅರ್ಚನಾ ಸುದ್ದಿಗೋಷ್ಠಿಯಲ್ಲಿದ್ದರು.