ಮಂಡ್ಯ: ನಾಗಮಂಗಲ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ತಾನು ಆಂಬುಲೆನ್ಸ್ ತಡೆದು ನಿಲ್ಲಿಸಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಮಾಜಿ ಶಾಸಕ ಸುರೇಶ್‌ಗೌಡರು ಈಗ ಹೇಳಿದ ಮಾತಿನಂತೆ ನಡೆದುಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆರ್.ಶರತ್ ರಾಮಣ್ಣ ಆಗ್ರಹಿಸಿದ್ದರು.
ತಾನು ಆಂಬುಲೆನ್ಸ್ ತಡೆದೇ ಇಲ್ಲವೆಂದು ಸುರೇಶ್‌ಗೌಡರು ಹೇಳಿದ್ದರು. ಆದರೆ, ಅವರು ತಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸಾಬೀತಾಗಿದೆ. ವಚನ ಭ್ರಷ್ಟರ ಪಕ್ಷವೆಂದು ಜೆಡಿಎಸ್ ಕಳಂಕ ಅಂಟಿಕೊಂಡಿದೆ. ಅದನ್ನು ತೊಡೆದು ಹಾಕಲು ಸುರೇಶ್‌ಗೌಡರು ಯಾವಾಗ ರಾಜಕೀಯ ನಿವೃತ್ತಿ ಪಡೆಯುತ್ತಾರೆಂಬುದನ್ನು ಘೋಷಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2018ರಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಗೆದ್ದಿದ್ದರು. ಅವರಲ್ಲಿ ಇಬ್ಬರು ಸಚಿವರೂ ಆಗಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ನವರೇ 14 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಈವರೆಗೆ ಜೆಡಿಎಸ್ ಶಾಸಕ, ಸಚಿವರ ಕೊಡುಗೆ ಏನು?. 2013ರವರೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾಗಿದ್ದ ಕಾಮಗಾರಿಗಳು, ಯೋಜನೆಗಳನ್ನು ಮುಂದುವರೆಸಿದ್ದೇ ಅವರ ಸಾಧನೆಯೇ? ಎಂದು ಪ್ರಶ್ನಿಸಿದರು.
ಜೆಡಿಎಸ್ ಶಾಸಕರು ಹೊಸ ಅನುದಾನವನ್ನು ತಂದು ಕೆಲಸ ಮಾಡಲಿಲ್ಲ. ಅದರಲ್ಲೂ ನಾಗಮಂಗಲದಲ್ಲಿ ಜನರನ್ನು ಕಾಡಿಬೇಡಿ 47 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದ ಸುರೇಶ್‌ಗೌಡರು ಮಾಡಿದ ಸಾಧನೆಯಾದರೂ ಏನು?. ಈಗ 4000 ಮತಗಳ ಅಂತರದಿಂದ ಅದೇ ಸುರೇಶ್‌ಗೌಡರು ಸೋತಿದ್ದಾರೆ. ಸೋಲಿನ ಹತಾಶೆಯಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಪ್ರವೀಣ್‌ಕುಮಾರ್, ಎಚ್.ಡಿ.ಪ್ರಸನ್ನ, ರವಿಕಾಂತೇಗೌಡ, ಕುಮಾರ್, ನೂರ್ ಅಹಮ್ಮದ್, ಸಂತೋಷ್ ಹಾಜರಿದ್ದರು.