ಮಂಡ್ಯ: ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ಹತಾಶೆ ಮನೋಭಾವದಿಂದಾಗಿ ಅನಾಗರಿಕರಂತೆ ವರ್ತಿಸುವುದು ಸರಿಯಲ್ಲ. ಓಲೈಕೆ ರಾಜಕಾರಣಕ್ಕಾಗಿ ವಿಧಾನಸಭೆ ಕಲಾಪದ ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಟೀಕಿಸಿದರು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದರು. ಅಂದು ಜನಾದೇಶಕ್ಕೆ ತಲೆಬಾಗಿ ಮೌನ ವಹಿಸುವಂತೆ ಸಲಹೆ ನೀಡಿದ್ದ ಜೆಡಿಎಸ್ ಶಾಸಕರು ಇಂದು ಮಾಜಿ ಶಾಸಕರಾದ ಒಂದೂವರೆ ತಿಂಗಳಲ್ಲೇ ಆರ್ಭಟಿಸಲು ಮುಂದಾಗಿರುವುದು ಎಚ್.ಡಿ.ಕುಮಾರಸ್ವಾಮಿ ಅವರ ಓಲೈಕೆಗಾಗಿಯೇ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 26 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ನರೇಂದ್ರಸ್ವಾಮಿ ಅವರು ಹಲವು ವರ್ಷಗಳ ನಂತರ ಪ್ರಶ್ನಿಸಲಾರಂಭಿಸಿದಾಗ 5 ವರ್ಷ ಬಾಯಿ ಮುಚ್ಚಿಕೊಂಡಿರುವಂತೆ ಡಾ.ಕೆ.ಅನ್ನದಾನಿ ಹೇಳಿಕೆ ನೀಡಿದ್ದರು. ಆದರೀಗ ಅವರು 46 ಸಾವಿರ ಮತಗಳಿಂದ ಸೋಲನ್ನಪ್ಪಿದ್ದು, ಅವರ ಹೇಳಿಕೆ ನೆನಪಾಗುತ್ತಿಲ್ಲವೇ?. ಅನ್ನದಾನಿ ಅವರ ಚರಿತ್ರೆ ಮತ್ತು ಸಂಸ್ಕೃತಿ ಕ್ಷೇತ್ರದ ಜನರಿಗೆ ಮನವರಿಕೆ ಆಗಿದ್ದು, ಪ್ರಸ್ತುತ ಚುನಾವಣೆಯಲ್ಲಿ ಸಾಬೀತಾಗಿದೆ. ಪರಿಣಾಮ ಮಳವಳ್ಳಿ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ಆದ್ದರಿಂದ ಅವರಿಂದ ಸಂಸ್ಕೃತಿ ಕಲಿಯುವ ಅವಶ್ಯತೆ ನಮಗಿಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಶಾಸಕ ಕೆ.ಸುರೇಶ್‌ಗೌಡ ಸಚಿವ ಚಲುವರಾಯಸ್ವಾಮಿ ಅವರ ವೈಯಕ್ತಿಕ ವಿಷಯದ ಬಗ್ಗೆ ಟೀಕೆ ಮಾಡಿರುವುದು ಅಕ್ಷಮ್ಯ. ಸುರೇಶ್‌ಗೌಡರನ್ನು ಛತ್ರಿ ಸುರೇಶ ಹಾಗೂ ಅವರ ತಂದೆಯನ್ನು ಛತ್ರಿ ಕೃಷ್ಣಪ್ಪ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ವಿಷ ಸೇವಿಸಿದ್ದ ಚಾಲಕ ಜಗದೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದಾಗ ಆಂಬುಲೆನ್ಸ್ ತಡೆದು ವಿಳಂಬ ಮಾಡಿದ್ದೀರಿ. ಈ ಘಟನೆ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ಜತೆಗೆ ನಾನು ಆಂಬುಲೆನ್ಸ್ ತಡೆದಿಲ್ಲ. ಒಂದು ವೇಳೆ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದೀರಿ. ಈಗ ಸಾಕ್ಷೃ ಹೊರಬಂದಿದೆ. ಯಾವಾಗ ನಿವೃತ್ತಿ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಇನ್ನು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಮನಬಂದಂತೆ ಮಾತನಾಡಿರುವುದು ಮೂರ್ಖತನದ ಪರಮಾವಧಿ. ಅಧಿಕಾರಕ್ಕಾಗಿ ಬಿಜೆಪಿಯವರ ಕಾಲುಹಿಡಿಯುವ ನೀವು ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರ ವಿರುದ್ಧ ಏಕೆ ಹೋರಾಟ ಮಾಡಲಿಲ್ಲವೆಂಬುದು ಗೊತ್ತಾಗಲಿಲ್ಲ. ಎಚ್‌ಡಿಕೆ ಕೇವಲ ಭರವಸೆ ನೀಡಿದ್ದರೆ ಹೊರತು ಅನುಮೋದನೆಯಾಗಲಿ, ಅನುಷ್ಠಾನವನ್ನಾಗಲಿ ಮಾಡಲಿಲ್ಲ. ಅನುದಾನ ಕೊಟ್ಟಿರುವ ಬಗ್ಗೆ ದಾಖಲೆಯಿದ್ದರೆ ಬಿಡುಗಡೆ ಮಾಡಿ. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ತಮ್ಮನ್ನು ಆ ಸ್ಥಾನಕ್ಕೆ ತಂದವರು ಯಾರೆಂಬುದನ್ನು ನೆನಪು ಮಾಡಿಕೊಳ್ಳಬೇಕೆ ಹೊರತು ಸದನದಲ್ಲಿ ನಡೆಯುವ ಚರ್ಚೆಯನ್ನು ಮುಂದಿಟ್ಟುಕೊಂಡು ಕಿರುಚಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಎಚ್.ಬಿ.ರಾಮು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ನಿರ್ದೇಶಕ ಹಾಲಹಳ್ಳಿ ಅಶೋಕ್, ಜಿಪಂ ಮಾಜಿ ಸದಸ್ಯರಾದ ಬಿ.ಎಲ್.ದೇವರಾಜು, ಕೋಡಿಮಾರನಹಳ್ಳಿ ದೇವರಾಜು, ಸುಂಡಹಳ್ಳಿ ಮಂಜುನಾಥ್, ಕೌಡ್ಲೆ ಚನ್ನಪ್ಪ ಇದ್ದರು.