ಜಿಲ್ಲೆ

ಸ್ಟೇಟಸ್ ಹಾಕಿದ್ದಕ್ಕೆ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಮೇಲೆ ಕಾಂಗ್ರೆಸ್ ಪುರಸಭೆ ಸದಸ್ಯನಿಂದ ಹಲ್ಲೆ

ವಿಜಯವಾಣಿ ಸುದ್ದಿಜಾಲ ವಾಡಿ

ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ್ದನ್ನೇ ನೆಪ ಮಾಡಿಕೊಂಡು ಚಿತ್ತಾಪುರ ತಾಲೂಕಿನ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಮೇಲೆ ಪುರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಕೇಸರಿ ಪಡೆ ಮತ್ತು ಕೈ ಪಡೆ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿಸುವಂತಿದೆ.

ಬಿಜೆಪಿ ವಾಡಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಯಾರಿ ಹಲ್ಲೆಗೊಳಗಾದವರು. ಗಾಯಗೊಂಡಿರುವ ಅವರನ್ನು ಕಲಬುರಗಿಯ ಜಿಮ್ಸ್ ಆವರಣದಲ್ಲಿರುವ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಾಂಗ್ರೆಸ್‌ನ ಪುರಸಭೆ ಸದಸ್ಯರಾಗಿರುವ ಪೃಥ್ವಿರಾಜ ಸೂರ್ಯವಂಶಿ ಎಂಬುವರೇ ಹಲ್ಲೆ ನಡೆಸಿದವರು. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಕೈ ಪುರಸಸಭೆ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿಷ್ಟು : ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಈರಣ್ಣ ಯಾರಿ ತಮ್ಮ ಮೊಬೈಲ್‌ನಲ್ಲಿ ಕೇವಲ ಕಾಂಗ್ರೆಸ್‌ನವರು ಇರುವ ಓಣಿಗಳಿಗೆ ನೀರು ಬಿಡುವಂತಿದೆ.ಬಿಜೆಪಿಯವರುವ ಕಡೆ ನೀರು ಬಿಡುತ್ತಿಲ್ಲ ಎಂದು ಸ್ಟೇಟಸ್ ಹಾಕಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳ ಜತೆಗೆ ಮಾತನಾಡಿ, ತಮ್ಮ ಬಡಾವಣೆಗೆ ನೀರು ಸರಬರಾಜು ಮಾಡುವಂತೆ ಕೋರಿ ಒತ್ತಾಯಿಸಿದ್ದಾರೆ. ಈರಣ್ಣನವರ ಸ್ಟೇಟಸ್ ನೋಡಿದ ಕಾಂಗ್ರೆಸ್ ಪುರಸಭೆ ಸದಸ್ಯ ಪೃಥ್ವಿರಾಜ ಈರಣ್ಣ ಅವರ ಅಂಗಡಿಗೆ ಬಂದು ವಿಚಾರಿಸಿದ್ದಾರೆ. ಆಗ ಸ್ಟೇಟಸ್ ಹಾಕಿದ್ದೆ, ಕೆಲಹೊತ್ತಿನಲ್ಲಿಯೇ ಅದನ್ನು ಅಳಿಸಿ ಹಾಕಿz್ದೆÃನೆ ಎಂದು ಹೇಳಿದ್ದಾರೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದೆ. ಈ ವೇಳೆ ಕಾಂಗ್ರೆಸ್‌ನ ಪೃಥ್ವಿರಾಜ, ಬಿಜೆಪಿಯ ಈರಣ್ಣ ಮೇಲೆ ಕೈ ಮಾಡಿದ್ದಾರೆ. ಅಲ್ಲದೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಬಿಜೆಪಿ ಪುರಸಭೆ ಸದಸ್ಯ ಭೀಮಶಾ ಬೀರನಳ್ಳಿ ಎಂಬುವರು ಜಗಳ ಬಿಡಿಸಿ ಇಬ್ಬರನ್ನು ಸಮಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಗಾಯಗೊಂಡಿದ್ದ ಯಾರಿ ಅವರನ್ನು ಕಲಬುರಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು.ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.