ಹೊನ್ನಾವರ: ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು 100 ವರ್ಷ ಆಗಿರುವ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಜ. 21ರಂದು ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಕುಮಟಾ- ಹೊನ್ನಾವರ ಕ್ಷೇತ್ರದಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶಕ್ಕೆ ಸಂಬಂಧಿಸಿದಂತೆ ನನಗೆ ಕುಮಟಾ- ಹೊನ್ನಾವರದ ಉಸ್ತುವಾರಿ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದರು.
ಶರಾವತಿ ಕುಡಿಯುವ ನೀರಿನ ಯೋಜನೆ ಬೆಂಗಳೂರಿಗೆ ಕೊಂಡೊಯ್ಯಲು ವಿರೋಧವಿದೆ. ಬಿಜೆಪಿ ಸರ್ಕಾರ ಈ ಯೋಜನೆ ಜಾರಿಗೆ ತರಲು ಆರಂಭದಲ್ಲಿ ಮುತುವರ್ಜಿ ವಹಿಸಿದ್ದು, ಕಾಂಗ್ರೆಸ್ ಸರ್ಕಾರ ಪ್ರಸ್ತಾಪಿಸಿದಾಗ ವಿರೋಧ ವ್ಯಕ್ತಪಡಿಸಿದೆ. ಬಳಿಕ ಈ ಯೋಜನೆ ಜಾರಿಗೆ ಮುಂದಾಗಿಲ್ಲ. ಈ ಯೋಜನೆ ಆರಂಭಿಸಲು ಆದೇಶ ಮಾಡುವುದಿಲ್ಲ. ಜನವಿರೋಧಿ ಯೋಜನೆಗೆ ನನ್ನ ವಿರೋಧವಿದೆ. ಆದರೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧವಿಲ್ಲ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೊಸದಾಗಿ ಆಣೆಕಟ್ಟು ಕಟ್ಟಲು ಸಾವಿರಾರು ಎಕರೆ ಭೂಮಿ ಯೋಜನೆಗೆ ಬಿಡಬೇಕು. ಅದರ ಬದಲು ಇಂತಹ ಯೋಜನೆಯಿಂದ ಮುಂದಿನ ಪೀಳಿಗೆಗೆ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಲು ಅಗತ್ಯ ಕ್ರಮಕ್ಕೆ ಮುಂದಾಗುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಹೇಶ ನಾಯ್ಕ, ಭುವನ ಭಾಗ್ವತ, ವಸಂತ ನಾಯ್ಕ, ವಿ.ಕೆ. ವಿಶಾಲ್, ಗ್ರಾಪಂ ಅಧ್ಯಕ್ಷೆ ಪುಷ್ಪಾ ನಾಯ್ಕ, ಎಂ.ಎನ್. ಸುಬ್ರಹ್ಮಣ್ಯ, ಬಾಲಚಂದ್ರ ನಾಯ್ಕ, ಅಣ್ಣಪ್ಪ ಗೌಡ ಇದ್ದರು.
ಸಚಿವ ಸಂಪುಟ ಪುನರ್ ರಚನೆಯಾದರೆ ನಾನು ಸಚಿವ ಸ್ಥಾನದ ಆಕಾಂಕ್ಷಿ. ನಾನೇನು ಸನ್ಯಾಸಿಯಲ್ಲ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನನಗೂ ಅರ್ಹತೆಯಿದೆ. ಪಕ್ಷ ಒಪ್ಪಿದರೆ ಸಚಿವನಾಗುತ್ತೇನೆ. ಇಲ್ಲದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಹೊರತು, ವಿರೋಧ ಮಾಡುವುದಿಲ್ಲ. ಬೇಳೂರು ಗೋಪಾಲಕೃಷ್ಣ, ಶಾಸಕ