ಮೈಸೂರು: ‘ಟಿಪ್ಪು ಸುಲ್ತಾನ್ ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು’ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ಮಹಿಳಾ ಘಟಕದಿಂದ ಶುಕ್ರವಾರ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಕಪ್ಪು ಪಟ್ಟಿಧರಿಸಿ ನಗರದ ಕಾಂಗ್ರೆಸ್ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಠಾಣೆಗೆ ತೆರಳಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ಥನಾರಾಯಣ ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಂದು ಒತ್ತಾಯಿಸಿದರು. ನನ್ನನ್ನೂ ಹತ್ಯೆ ಮಾಡಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೇಂದ್ರ ಸಚಿವ ಅಮಿತ್ ಷಾ ಬಂದು ಹೋದ ಮೇಲೆ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಬಿಜೆಪಿಯಲ್ಲಿ ಮೂವರನ್ನು ನೇಮಿಸಲಾಗಿದೆ. ಸಿ.ಟಿ. ರವಿ, ಅಶ್ವತ್ಥನಾರಾಯಣ ಹಾಗೂ ಕೆ.ಎಸ್.ಈಶ್ವರಪ್ಪ ಈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ವಿರುದ್ಧ ಹೊಡಿ ಬಡಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಗೆ ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಪದೇ ಪದೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮನ್ನು ಕೊಲ್ಲಲಿ ಬಳಿಕ ಸಿದ್ದರಾಮಯ್ಯ ಬಳಿ ಹೋಗಲಿ. ಇಡಿ, ಐಟಿ ಸಿದ್ದರಾಮಯ್ಯ ಬಳಿ ಹೋಗಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಂತಿಮವಾಗಿ ಈ ರೀತಿ ಮಾಡುತ್ತಿದ್ದಾರೆ. ಒಬ್ಬ ಉಪಮುಖ್ಯಮಂತ್ರಿ ಆಗಿದ್ದವರು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಮಂದಿನ ದಿನಗಳಲ್ಲಿ ಮೈಸೂರು ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಮಾತನಾಡಿ, ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಕೆಡವೋ ಕೆಲಸ ಮಾಡುತ್ತಿದೆ. ಹೊಡಿ, ಬಡಿ, ಕೊಲ್ಲಿ ಎಂಬುದು ಬಿಜೆಪಿ ರಕ್ತದಲ್ಲಿದೆ. ಇದು ಅಶ್ವತ್ಥನಾರಾಯಣ ಒಬ್ಬರ ಹೇಳಿಕೆಯಲ್ಲ, ಇಡೀ ಬಿಜೆಪಿ ಹೇಳಿಕೆಯಾಗಿದೆ. ಸಿದ್ದರಾಮಯ್ಯ ಅವರನ್ನು ಮುಟ್ಟುವುದಿರಲಿ ನಮ್ಮನ್ನು ಮುಟ್ಟಿ ನೋಡಿ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರಿಗೆ ಮೊದಲು ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ. ಸಿಎಂ ಬೊಮ್ಮಾಯಿ ಅವರು ಕೂಡಲೇ ಇಂತಹ ವ್ಯಕ್ತಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಗರಾದ್ಯಕ್ಷ ಆರ್.ಮೂರ್ತಿ, ಜಿಲ್ಲಾದ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರಿಗೌಡ, ಬಿ.ಎಂ. ರಾಮು, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಲತಾ ಸಿದ್ದಶೆಟ್ಟಿ ಇತರರಿದ್ದರು.