ಜಿಲ್ಲೆ

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ದೇಶಕ್ಕೆ ಅನಿವಾರ್ಯ: ಸಚಿವ ಕೆ.ಎಚ್.ಮುನಿಯಪ್ಪ

ಮೈಸೂರು: ಧರ್ಮ, ಜಾತಿ ನೋಡದೆ ಜನಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಬೆಂಬಲ ನೀಡಬೇಕು ಎಂದು ಆಹಾರ, ನಾಗರಿಕ ಮತ್ತು ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಕೋರಿದರು.


ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹೂಟಗಳ್ಳಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ದಲಿತ ಸಮಾಜದ ಮುಖಂಡರ ಸಮಾವೇಶದಲ್ಲಿ ಮಾತನಾಡಿದರು.


ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ನಾಡಿನ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಈ ರೀತಿ ಸವಲತ್ತು ಒದಗಿಸಿಕೊಡಲು ಪಕ್ಷದ ಕೈಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕೋರಿದರು.


ಜಾತ್ಯತೀತ ನಿಲುವಿನಲ್ಲಿ ನಂಬಿಕೆ, ಬದ್ಧತೆ ಹೊಂದಿರುವ ಕಾಂಗ್ರೆಸ್ ದೇಶಕ್ಕೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಗೆಲ್ಲುವ ಶಕ್ತಿ ಹೊಂದಿದೆ ಎಂದರು.


ಬಡವರಿಗೆ 10 ಕೆಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದರೂ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರ ಬೇಕೋ ಅಥವಾ ಬೇಡವೇ ಎನ್ನುವುದನ್ನು ಯೋಚಿಸಿ ತೀರ್ಮಾನವನ್ನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತೆಗೆದುಕೊಳ್ಳಬೇಕು ಎಂದು ಮತದಾರರಿಗೆ ಹೇಳಿದರು.


ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. 400 ಸೀಟುಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡಬಹುದು ಎನ್ನುವ ಚಿಂತನೆಯನ್ನು ಬಿಜೆಪಿಯವರು ಹೊಂದಿದ್ದಾರೆ. ಸಂವಿಧಾನ ಬದಲಾದರೆ ದೊಡ್ಡ ಆಪತ್ತು ಎದುರಾಗಲಿದೆ. ಈ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕು ಎಂದು ಹೇಳಿದರು.


ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಸಂರಕ್ಷಣೆ ಮಾಡಲು ಶೂದ್ರರೆಲ್ಲರೂ ಒಂದಾಗಬೇಕು. ಕಾಂಗ್ರೆಸ್ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಪರವಾಗಿದ್ದರೆ, ಬಿಜೆಪಿ ಈ ಸಮುದಾಯಗಳ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ತರಬೇಕು. ಇಲ್ಲವಾದರೆ, 150 ವರ್ಷಗಳು ಹಿಂದಕ್ಕೆ ಹೋಗಬೇಕಾಗುತ್ತದೆ. ಸಂವಿಧಾನ ಬದಲಾದರೆ ಗುಲಾಮರಾಗಿ ಬದುಕುವ ಪರಿಸ್ಥಿತಿ ಬರಲಿದೆ. ಪರಿಶಿಷ್ಟ ಜಾತಿಯಲ್ಲಿರುವ ಎಡ-ಬಲ ಸಮುದಾಯಗಳು ಒಂದಾಗಬೇಕು ಎಂದರು.


ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್.ಧರ್ಮಸೇನ, ವಿಧಾನ ಪರಿಷತ್ ಮಾಜಿ ಸದಸ್ಯ ವೇಣುಗೋಪಾಲ್, ಮುಡಾ ಅಧ್ಯಕ್ಷ ಕೆ.ಮರೀಗೌಡ,

ಭೋವಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಅರುಣ್‌ಕುಮಾರ್, ಅಹಿಂದ ಜವರಪ್ಪ, ಮಾಜಿ ಮೇಯರ್ ನಾರಾಯಣ, ಉಪ ಮೇಯರ್ ಬಿ.ಸಿದ್ದರಾಜು, ಶ್ರೀಧರ್, ಮುಖಂಡರಾದ ಸತ್ಯರಾಜ್, ನಾಗವಾಲ ನರೇಂದ್ರ, ಎಡತೊರೆ ನಿಂಗರಾಜ್‌ಕಾಳಯ್ಯ, ಈಶ್ಚರ್ ಚಕ್ಕಡಿ, ಎಂ.ಶಿವಣ್ಣ ಇನ್ನಿತರರಿದ್ದರು.

ಕೆ.ಶಿವರಾಂ ಅವರಿಗೆ ಬಿಜೆಪಿಯಿಂದ ಅನ್ಯಾಯ: ವಾಣಿ ಶಿವರಾಮ್ ಕಿಡಿ


ನನ್ನ ಪತಿ ಕೆ.ಶಿವರಾಂ ಅವರಿಗೆ ಬಿಜೆಪಿಯಿಂದ ಅನ್ಯಾಯ ಆಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಮ್ ಕಿಡಿಕಾರಿದರು. ಬಡವರ ಪರ ಕೆಲಸ ಮಾಡುವ ಆಕಾಂಕ್ಷೆಯಿದ್ದ ನಾಯಕನಿಗೆ ಅನ್ಯಾಯ ಮಾಡಿದವರಿಗೆ ದಲಿತ ಸಮಾಜವು ತಕ್ಕ ಉತ್ತರ ಕೊಡಬೇಕು ಎಂದು ಹೇಳಿದರು.