ಜಿಲ್ಲೆ

ಪಕ್ಷ ಬಿಟ್ಟಿದ್ದರೂ ಕಾಂಗ್ರೆಸ್​ ಸ್ನೇಹಿತರೊಂದಿಗೆ ಸಂಪರ್ಕ: ಹೆಗ್ಡೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪಕ್ಷ ತೊರೆದ ನಂತರವೂ ಕಾಂಗ್ರೆಸ್​ ನಾಯಕರ ಜೊತೆ ಸಂಪರ್ಕದಲ್ಲಿದ್ದೆ. ಕಾಂಗ್ರೆಸ್​ ಸ್ನೇಹಿತರ ಜೊತೆ, ಸ್ನೇಹಚಾರ ಬಿಟ್ಟಿಲ್ಲ, ರಾಜಕೀಯ ಹೊರತಾಗಿಯೂ ಒಂದು ಜೀವನ ಇದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಜನರ ಅಭಿವೃದ್ಧಿ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗುತ್ತಿದ್ದೇವೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್​ ಹೆಗ್ಡೆ ಹೇಳಿದರು.

ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದ ಸಂಘಟನೆ ಮಾಡುವುದರ ಜೊತೆಗೆ ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು. ಎರಡು ಜಿಲ್ಲೆಯ ಪದಾಧಿಕಾರಿಗಳನ್ನು ಒಟ್ಟು ಸೇರಿಸಿ ಒಂದು ಕಾರ್ಯಕ್ರಮ ಮಾಡುವ ಯೋಜನೆ ಇದೆ. ನನಗೆ ಟಿಕೆಟ್​ ಸಿಗುವ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ. ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದು, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ. ಜಿಲ್ಲೆಯ ಡೀಮ್ಡ್​ ಫಾರೆಸ್ಟ್​ ಸಮಸ್ಯೆಗೆ ಪರಿಹಾರ ಬೇಕು ಎಂದು ತಿಳಿಸಿದ್ದೇನೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಂಟಿ ಸರ್ವೆ ಪ್ರಾರಂಭವಾಗಿದೆ ಎಂದರು.

ನನ್ನ ಜೊತೆ ಸೇರಿದವರು ವಾಪಾಸು ಬರುತ್ತಾರೆ
ಜಾತಿಯ ಬಗ್ಗೆ ಚರ್ಚೆ ಮಾಡುವುದು ಕಡಿಮೆ ಮಾಡಿದಷ್ಟು ಸೌಹಾರ್ದಯುತವಾಗಿ ಕೆಲಸ ಮಾಡಬಹುದು. ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ವಾಪಸು ಬರುತ್ತಾರೆ. ಒಂದೇ ಸಲ ಎಲ್ಲರನ್ನೂ ಕರೆದುಕೊಂಡು ಬರಲು ಅಸಾಧ್ಯ. ಯಾರಿಗೂ ಒತ್ತಡ ಹಾಕಿ ಬನ್ನಿ ಎಂದು ಹೇಳುವುದು ಸರಿಯಾಗುವುದಿಲ್ಲ. ಎರಡು ಜಿಲ್ಲೆಯಲ್ಲಿ ಅನೇಕ ಮಂದಿ ನನ್ನ ಜೊತೆ ಬರುತ್ತೇನೆ ಎಂದಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಅನಾಥ ಮಕ್ಕಳ ಬಗ್ಗೆ ನಾನೊಂದು ವರದಿ ಕೊಟ್ಟಿದ್ದೇನೆ. ಅದನ್ನು ಅತಿ ಶೀಘ್ರ ಜಾರಿಗೆ ತರುವಂತೆ ಕೇಳಿದ್ದೇನೆ. ಸಂಪೂರ್ಣ ವರದಿಯನ್ನು ಜಾರಿಗೆ ತಂದರೆ ತುಂಬಾ ಸಂತೋಷ. ಅನೇಕ ಹಿಂದುಳಿದ ಜಾತಿಗಳಿಗೆ ಪಟ್ಟಿಯಲ್ಲಿ ಇರುವುದೇ ಗೊತ್ತಿರಲಿಲ್ಲ. ಅನೇಕ ಜನರಿಗೆ ನಮಗೆ ಮೀಸಲಾತಿ ಸಿಗಲಿದೆ ಎಂದು ಗೊತ್ತಿಲ್ಲ. ವೀರಶೈವ ಲಿಂಗಾಯತರು ತಮಗೆ ಮೀಸಲಾತಿ ಇಲ್ಲ ಎಂದೇ ಭಾವಿಸಿದ್ದರು. ತಾವು ಪ್ರವರ್ಗ ಮೂರರಲ್ಲಿ ಬರುತ್ತೇವೆ ಎಂಬುದು ಗೊತ್ತಿರಲಿಲ್ಲ ಎಂದರು. ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಉಪಸ್ಥಿತರಿದ್ದರು.