ಜಿಲ್ಲೆ

ಚಾರ್ಲಿಗೆ ಕಣ್ಣೀರು ಹಾಕುವ ಸಿಎಂಗೆ ಜನತೆಗೆ ನೆರವಾಗುವ ಹೃದಯವಂತಿಕೆ ತೋರಲು ಕಷ್ಟವೇ? ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ 5 ರೂ. , ಡೀಸೆಲ್ 3 ರೂ. ಕಡಿಮೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಚಾರ್ಲಿ 777 ಸಿನಿಮಾವನ್ನು ನೋಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯಲ್ಲಿ ಸಾಕಿದ್ದ ನಾಯಿ ಸಾವನ್ನಪ್ಪಿದ್ದನ್ನು ನೆನೆದು ಭಾವುಕರಾಗಿದ್ದರು. ಇದನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯವಂತಿಕೆ ತೋರಲು ಕಷ್ಟವೇ? ಎಂದು ಕೂ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

ಮಹರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದ್ದಾರೆ.

ಏಕನಾಥ್​ ಶಿಂಧೆ ಮಹತ್ವದ ನಿರ್ಧಾರ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಗಗನಕ್ಕೇರಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಕಡಿತಗೊಳಿಸುವ ಮೂಲಕ ಸ್ವಲ್ಪ ಮಟ್ಟಿನ ಹೊರೆಯನ್ನು ಇಳಿಸಿದ್ದಾರೆ. ಲೀಟರ್​ ಪೆಟ್ರೋಲ್​ಗೆ 5 ರೂ. ಹಾಗೂ ಡೀಸೆಲ್​ ಬೆಲೆಯಲ್ಲಿ 3 ರೂ. ಇಳಿಕೆ ಮಾಡಿದ್ದಾರೆ. ಇಂಧನ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಘೋಷಿಸುವುದಾಗಿ ಹೇಳಿದ್ದ ವಾರದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೇ ತೈಲ ಬೆಲೆ ಇಳಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 6,000ಕೋಟಿ ರೂ. ಹೊರೆ ಬೀಳಲಿದೆ ಎಂದು ಶಿಂಧೆ ಹೇಳಿದ್ದರು. ಆದಾಗ್ಯೂ ತೈಲ ಬೆಲೆ ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದಾರೆ.