ಶಿವಮೊಗ್ಗ: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ(ಮ್ಯಾಮ್‌ಕೋಸ್) ಆಡಳಿತ ಮಂಡಳಿಗೆ ಫೆ.4ರಂದು ಚುನಾವಣೆ ನಡೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಚನ್ನಗರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಒಳಗೊಂಡ ದೊಡ್ಡ ಸಂಸ್ಥೆಯಾಗಿದ್ದು 20 ವರ್ಷಗಳಿಂದ ಅದನ್ನು ಹಾಳುಮಾಡಲಾಗಿದೆ. ಪುನಃ ಸಾರ್ವಜನಿಕ ಸಹಕಾರಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಮ್ಯಾಮ್‌ಕೋಸ್ ಚುನಾವಣೆ ಪಕ್ಷಾತೀತವಾಗಿದ್ದರೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಇದ್ದೇ ಇರುತ್ತಾರೆ. ಹಾಗಾಗಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದಡಿ ಕಾಂಗ್ರೆಸ್ ಬೆಂಬಲಿಗರು ಸ್ಪರ್ಧೆ ಮಾಡುತ್ತಿದ್ದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮ್ಯಾಮ್‌ಕೋಸ್ ಆಡಳಿತ ಮಂಡಳಿ ಜಡ್ಡುಗಟ್ಟಿದ್ದು ವ್ಯವಸ್ಥೆ ಹದಗೆಟ್ಟಿದೆ. ಅದನ್ನು ಬದಲಾವಣೆ ಮಾಡುವ ಸಂಬಂಧ ಹೈಕಮಾಂಡ್‌ನಿಂದ ನಿರ್ದೇಶನವಿದೆ. ಹಾಗಾಗಿ ಗಂಭೀರವಾಗಿ ಚುನಾವಣೆ ಎದುರಿಸಲಾಗುತ್ತಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರಕ್ಕೆ ನಡೆಸಲಿದ್ದೇವೆ ಎಂದರು.
ಎಂಎಲ್‌ಸಿ ಬಲ್ಕಿಷ್‌ಬಾನು, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ವೈ.ಎಚ್.ನಾಗರಾಜ್, ಸಿ.ಎಸ್.ಚಂದ್ರಭೂಪಾಲ್, ಮಧು, ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.