ಜಿಲ್ಲೆ

ಜೆಡಿಎಸ್ ನಾಯಕರಿಂದ ಸ್ವಾರ್ಥ ರಾಜಕಾರಣ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಟೀಕೆ

ಮಂಡ್ಯ: ಜೆಡಿಎಸ್ ನಾಯಕರು ಸ್ವಾರ್ಥ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ ಹೇಳಿದರು.

ಕೆಲ ದಿನಗಳ ಹಿಂದೆ ನಾಗಮಂಗಲ ತಾಲೂಕಿನಲ್ಲಿ ನಡೆದ ಸಾರಿಗೆ ಬಸ್ ನಿರ್ವಾಹಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು ತಿಳಿಸಿ ಹೇಳಬೇಕಿಲ್ಲ. ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ ಕೊಂಡೊಯ್ಯಲು ಬಿಡದೆ ಇಲ್ಲೇ ಆಗಬೇಕು ಎಂದು ಪಟ್ಟು ಹಿಡಿಯುವ ಮೂಲಕ ಅಮಾನವೀಯತೆಯಿಂದ ನಡೆದುಕೊಂಡಿದ್ದಾರೆ ಎಂದು ಸುರೇಶ್‌ಗೌಡ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಸಹ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಸ್ವಾರ್ಥ ರಾಜಕಾರಣಕ್ಕಾಗಿ ಸದನದಲ್ಲಿ ಪ್ರಸ್ತಾಪಿಸಿ ಗೊಂದಲ ಉಂಟು ಮಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ-ಸೂಚನೆಗಳನ್ನು ನೀಡಿದರೂ ಅದನ್ನು ಸ್ವೀಕರಿಸಲು ಸಿದ್ದರಿದ್ದೇವೆ. ಆದರೆ, ಇಂತಹ ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಈ ಹಿಂದೆ ಜಿಲ್ಲೆಯ ಜನತೆ ನೀಡಿದ್ದ ಅವಕಾಶದಲ್ಲಿ ತಾವುಗಳು ಜಿಲ್ಲೆಗೆ ಮಾಡಿರುವ ಅಭಿವೃದ್ಧಿಯನ್ನು ಜನತೆಯ ಮುಂದೆ ನೀಡಬೇಕು. ಸಕ್ಕರೆ ಕಾರ್ಖಾನೆ ಸ್ಥಿತಿ ಶೋಚನೀಯವಾಗಿತ್ತು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯನ್ನು ಸಮಾಧಿ ಮಾಡಿದ್ದು, ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡದೆ ವಂಚಿಸಿರುವುದಕ್ಕಾಗಿ ಜನತೆ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಸಲ್ಲದ ರಾಜಕಾರಣ ಬಿಟ್ಟು ಅಭಿವೃದ್ಧಿ ಪರವಾದ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ನಮ್ಮ ನಾಯಕ ಚಲುವರಾಯಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮತದಾರರ ಮಾತು ಕೇಳಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಭೆಯಲ್ಲೇ ಹೇಳಿದ್ದಾರೆಯೇ ಹೊರತು, ಮತ ಕೊಟ್ಟವರ ಕೆಲಸ ಮಾತ್ರ ಮಾಡಿಕೊಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಜನರ ಹಿತವನ್ನೂ ಗಣನೆಗೆ ತೆಗೆದುಕೊಂಡು ಸಾಮಾಜಿಕ ನ್ಯಾಯದಡಿ ಶ್ರೇಷ್ಟ ಬಜೆಟ್ ನೀಡಿದ್ದಾರೆ. ಇದರಲ್ಲಿ ಯಾವುದೇ ಲೋಪವೂ ಇಲ್ಲ. ವಿಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುತ್ತಿವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಚಿಂತನೆ ನಡೆಸಲಾಗಿದೆ. ಅದಕ್ಕೆ ಪೂರಕವೆಂಬಂತೆ ಮೊದಲಿಗೆ ಮೈಶುಗರ್‌ಗೆ 50 ಕೋಟಿ ರೂ ಅನುದಾನ ಕೊಟ್ಟು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಪುನಶ್ಚೇತನ ನೀಡುವ ಬಗ್ಗೆಯೂ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ ಎಂದರು.

ಜಿಲ್ಲಾ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಬೇಕಿದೆ. ಪಕ್ಕದ ಜಾಗವನ್ನು ತೆರವು ಮಾಡಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ವಿಶೇಷ ಒತ್ತು ನೀಡುವುದು ನಮ್ಮ ಮುಂದಿರುವ ಪ್ರಸ್ತಾಪವಾಗಿದೆ. ಮಂಡ್ಯ ನಗರದಲ್ಲಿ ವರ್ತಲ ರಸ್ತೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮೀಣ ರಸ್ತೆಗಳು, ನೀರಾವರಿ ಸೇರಿದಂತೆ ಸಮಗ್ರ ಜಿಲ್ಲೆಯ ಅಭಿವೃದ್ಧಿಗೆ ಕಾಯಕಲ್ಪ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯ ನಯೀಂ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜು, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ಸಿ.ಆರ್. ರಮೇಶ್ ಇದ್ದರು.