ಜಿಲ್ಲೆ

ಕಾಂಗ್ರೆಸ್, ಆಮ್‌ಆದ್ಮಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲು

ಉಡುಪಿ: ಜಿಲ್ಲಾಡಳಿತದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫ್ಲೆಕ್ಸ್‌ಗಳನ್ನು ಅಳವಡಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಕಾಂಗ್ರೆಸ್ ಹಾಗೂ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಾಯರ್‌ಕೆರೆ ರಸ್ತೆಯಲ್ಲಿರುವ ಕಾಂಗ್ರೆಸ್ ಭವನ ಎದುರು ತೆಂಗಿನ ಗರಿಯ ಚಪ್ಪರದ ಎದುರಿನ ಎರಡು ಅಡಿಕೆ ಕಂಬಗಳಿಗೆ ಎರಡು ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ಅಳವಡಿಸಿದ್ದು, ಪಕ್ಷದ ಪ್ರಣಾಳಿಕೆ ವಿವರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಭಾವಚಿತ್ರವಿದೆ. ಹೀಗಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಹಾಗೂ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ, ಉಡುಪಿ-ಬ್ರಹ್ಮಾವರ ಇವರ ವಿರುದ್ಧ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಬಗ್ಗೆ ಫ್ಲೈಯಿಂಗ್ ಸ್ಕ್ವ್ಯಾಡ್ ಟೀಮ್ ಅಧಿಕಾರಿಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಲ್ಸಂಕ ಜಂಕ್ಷನ್ ಬಳಿಯ ನಿಧಿ ಹೋಮ್ಸ್ ನಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿ ಮುಂಭಾಗದಲ್ಲಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಭಾವಚಿತ್ರವುಳ್ಳ ಎರಡು ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರಭಾಕರ ಪೂಜಾರಿ ತೊಟ್ಟಂ ಎಂಬುವವರು ಈ ಫ್ಲೆಕ್ಸ್ ಗಳನ್ನು ಅಳವಡಿಸಿ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.