ನರಗುಂದ: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ಜನ ವಿರೋಧಿ ನೀತಿ ಖಂಡಿಸಿ ಪಟ್ಟಣದ ಶಿವಾಜಿ ವರ್ತಲದಲ್ಲಿ ಶಾಸಕ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶ್ರೀಶೈಲ್ ತಳವಾರ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹಿಂದು ವಿರೋಧಿ ನೀತಿ ಅಳವಡಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅಲ್ಪಸಂಖ್ಯಾತರ ಮನವೊಲಿಸುವ ಸಲುವಾಗಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿದೆ. ರಾಜ್ಯದ ರೈತರಿಗೆ ನೀಡುತ್ತಿದ್ದ 4 ಸಾವಿರ ರೂಪಾಯಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ತಡೆ ನೀಡಿದೆ.
ಐದು ಗ್ಯಾರಂಟಿ ಯೋಜನೆಗಳಿಗಾಗಿ ರೈತ ವಿದ್ಯಾನಿಧಿ, ಭೂಸಿರಿ, ಕೃಷಿ ಭೂಮಿ ಮಾರಾಟ ಕಾಯ್ದೆ, ಮಹಿಳಾ ಕೃಷಿ ಕಾರ್ವಿುಕರಿಗೆ ನೀಡುವ ಶ್ರಮ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪಿಸುವುದು. ರೈತ ಸಂಪದ, ಎಪಿಎಂಸಿ ಕಾಯ್ದೆಗಳನ್ನು ಕೈಬಿಟ್ಟಿದೆ. ಮಳೆಯ ಅಭಾವದಿಂದ ರಾಜ್ಯದ 143ಕ್ಕೂ ಅಧಿಕ ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ.
ಯುದ್ಧೋದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಬೋರ್ವೆಲ್ ಹಾಗೂ ತೆರೆದ ಬಾವಿಗಳಿಗೆ ನಿರಂತರ 7 ಗಂಟೆ ವಿದ್ಯುತ್ ಪೊರೈಕೆ ಮಾಡಬೇಕು. ಜಲಾಶಯಗಳಲ್ಲಿ ಸಂಗ್ರಹಗೊಂಡಿರುವ ನೀರಿನ ಸದ್ಭಳಕೆಯ ಬಗ್ಗೆ ವ್ಯಾಪಕ ಕ್ರಮ ಕೈಗೊಳ್ಳಬೇಕು. ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಆಸ್ಪದ ಕೊಡದಂತೆ ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಚಂದ್ರು ದಂಡಿನ ಮಾತನಾಡಿದರು. ಪ್ರತಿಭಟನೆಯಲ್ಲಿ ಚಂಬಣ್ಣ ವಾಳದ, ಮಂಜುನಾಥ ಮೆಣಸಗಿ, ಎಂ.ಎಚ್. ತಿಮ್ಮನಗೌಡ್ರ, ಎಸ್.ಬಿ. ಕರಿಗೌಡ್ರ, ನೇತಾಜಿಗೌಡ ಕೆಂಪನಗೌಡ್ರ, ಎನ್.ವಿ. ಮೇಟಿ, ಮುತ್ತಣ್ಣ ಜಂಗಣ್ಣವರ, ಸಂತೋಷ ಹಂಚಿನಾಳ, ಶಂಕರಗೌಡ ನಡಮನಿ, ವೀರಸಂಗಯ್ಯ ಮೊಕಾಶಿ, ನೀಲಪ್ಪಗೌಡ ದಾನಪ್ಪಗೌಡ್ರ, ಜಗದೀಶ ಬೋಪಳಾಪೂರ, ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಅಜ್ಜುಗೌಡ ಪಾಟೀಲ, ಸುರೇಶ ಸಾತಣ್ಣವರ, ಮಲ್ಲಪ್ಪ ಮೇಟಿ, ಇತರರಿದ್ದರು.
ಮರಿ ನಾಯಕರ ಉಪಟಳ
ನರಗುಂದ ಮತಕ್ಷೇತ್ರದಲ್ಲಿ ಸೋತವರು ತಾವೇ ಎಂಎಲ್ಎ ಅಂತ ಹೇಳಿ ವಿವಿಧ ಕಚೇರಿಗೆ ಅಲೆದಾಡುತ್ತಿದ್ದಾರೆ. ಕಾಂಗ್ರೆಸ್ ಮರಿ ನಾಯಕರ ಉಪಟಳದಿಂದ ಇಲ್ಲಿಗೆ ಯಾವುದೇ ಉತ್ತಮ ಅಧಿಕಾರಿಗಳು ಬರುತ್ತಿಲ್ಲ. ಮಾಜಿ ಶಾಸಕ ಬಿ.ಆರ್. ಯಾವಗಲ್ಲ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಪರಿಣಾಮ ರಾಜ್ಯದ 224 ಕ್ಷೇತ್ರಗಳ ಪೈಕಿ ನರಗುಂದ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಕೋಟ್ಯಾಂತರ ರೂ. ಬಿಲ್ ತಡೆಹಿಡಿದಿದ್ದಾರೆ. ನರಗುಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಇಸ್ಪೀಟ್, ಮಟ್ಕಾ ಅಡ್ಡೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.