ಜಿಲ್ಲೆ

ಕಾಂಗ್ರೆಸ್‌ನಲ್ಲಿ ಒಡೆದ ಮನೆಯಾದ ಕಾಂಗ್ರೆಸ್ ; ದುರ್ಬಿನ್ ಹಾಕಿ ದೇಶದಲ್ಲಿ ಕಾಂಗ್ರೆಸ್ ಹುಡುಕಬೇಕು : ಮಾಜಿ ಸಿಎಂ ಜಗದೀಶ ಶೆಟ್ಟರ್

Tumakuru

ತುಮಕೂರು :  ಅಭ್ಯರ್ಥಿ ಆಯ್ಕೆಗೂ ಪೂರ್ವದಲ್ಲಿಯೇ ಬಿಜೆಪಿ ತನ್ನ ಕಾರ್ಯಕರ್ತರಿಗೆ ಚುನಾವಣೆಯ ಗಂಭೀರತೆ ತಿಳಿಸುವ ನಿಟ್ಟಿನಲ್ಲಿ ಶುಕ್ರವಾರ ನಗರದ ಗಾಜಿನಮನೆಯಲ್ಲಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶ ಮಳೆಯ ಕಾರಣಕ್ಕೊ, ಏನೋ ನಿರಸವಾಗಿತ್ತು.

ಚುನಾವಣೆ ಸಂದರ್ಭದಲ್ಲಿ ನಡೆಯುವ ಸಮಾವೇಶಗಳಲ್ಲಿ ಕಾಣಿಸುವ ಉತ್ಸಾಹ ಕಾಣಿಸಲಿಲ್ಲ, ಸಮಾವೇಶಕ್ಕೆ ಸಾವಿರಾರು ಕಾರ್ಯಕರ್ತ ಆಗಮಿಸಿದ್ದರು.

ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಷ್ಟ್ರದಲ್ಲಿ ಕಾಂಗ್ರೆಸ್ ಇಲ್ಲದಂತಾಗಿದೆ, ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಗೆ ಶಕ್ತಿ ನೀಡಬೇಕಿದ್ದು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು ಸಿದ್ದರಾಮಯ್ಯ, ಡಿಕೆಶಿ ನಡುವೆ ಭಿನ್ನಾಭಿಪ್ರಾಯವಿದೆ, ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೇರದು. ಭ್ರಮೆಯಲ್ಲಿರುವ ಸಿದ್ದರಾಮಯ್ಯ, ಶಿವಕುಮಾರ್ ಸಿಎಂ ಆಗುವ ಕನಸು ನನಸಾಗುವುದಿಲ್ಲ, ಪಂಜಾಬ್‌ನಲ್ಲಿ ಒಬ್ಬ ಸಿದ್ದು, ಕರ್ನಾಟಕದ ಈ ಸಿದ್ದು ಮಾತಿನಿಂದಲೇ ಕಾಂಗ್ರೆಸ್ ಮುಳುಗಿಸಲಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದರೆ ಅಭಿವೃದ್ಧಿಗೆ ನೆರವಾಗಲಿದೆ,

ಎಲ್ಲ ಗ್ರಾಮದಲ್ಲಿಯೂ ಬಿಜೆಪಿ ಗ್ರಾಪಂ ಸದಸ್ಯರಿದ್ದು, ದೇಶದಲ್ಲಿ 19 ಕೋಟಿ ಜನರು ಬಿಜೆಪಿ ಸದಸ್ಯರಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಕೂಡ ಸದಸ್ಯತ್ವ ಅಭಿಯಾನ ಆರಂಭಿಸಿದೆ ಆದರೆ, ಅವರ ಸಮಾವೇಶಕ್ಕೆ ಬಂದಿದ್ದವರಲ್ಲಿ ಎಷ್ಟು ಜನರು ನೋಂದಣಿ ಮಾಡಿಸಿದರು ಎಂಬ ಸ್ಥಿತಿಗತಿ ಬಹಿರಂಗಪಡಿಸಿ ಎಂದು ಡಿ.ಕೆ.ಶಿವಕುಮಾರ್‌ಗೆ ಸವಾಲೆಸೆದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಬೈರತಿ ಬಸವರಾಜು, ಗೋಪಾಲಯ್ಯ, ಬಿ.ಸಿ.ನಾಗೇಶ್, ಸಮಾವೇಶದ ಸಹ ಸಂಚಾಲಕ ತುಳಸಿ ಮುನಿರಾಜಗೌಡ, ಶಾಸಕರಾದ ಮಸಾಲಾ ಜಯರಾಂ, ಡಾ.ರಾಜೇಶ್‌ಗೌಡ ಮಾತನಾಡಿದರು. ಸಮಾವೇಶದಲ್ಲಿ ಬಿಜೆಪಿ ಹಿರಿಯ ಮುಖಂಡರು, ಪದಾಧಿಕಾರಿಗಳು ಇದ್ದರು.

ಬಿ.ಸುರೇಶ್‌ಗೌಡ ಗೈರು, ಮಾತನಾಡದ ಜಿಎಸ್‌ಬಿ!  ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ಗೈರು ಹೆಚ್ಚು ಚರ್ಚೆಯಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹಾಗೂ ಸಮಾವೇಶ ಆಯೋಜನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಸುರೇಶ್‌ಗೌಡ ಗೈರು ಆಶ್ಚರ್ಯ ಮೂಡಿಸಿತು. ಸಮಾವೇಶ ಆರಂಭವಾದ ಕೆಲವೇ ಕ್ಷಣದಲ್ಲಿ ಸಂಸದ ಜಿ.ಎಸ್.ಬಸವರಾಜು ನಿರ್ಗಮಿಸಿದರು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಕೂಡ ಮಾತನಾಡಲಿಲ್ಲ. ಇದೆಲ್ಲಾ ಪ್ರಹಸನಗಳು ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಪುಷ್ಟೀಕರಿಸಿತು. ಸಚಿವ ಬೈರತಿ ಬಸವರಾಜು, ಬಿ.ಸಿ.ನಾಗೇಶ್ ಮಾತನಾಡಿ, ಆರಂಭದಲ್ಲಿಯೇ ವೇದಿಕೆಯಿಂದ ನಿರ್ಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಕೆಲವೇ ನಿಮಿಷದಲ್ಲಿ ಮಾತು ಮುಗಿಸಿದರು ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ! ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್‌ಗೆ ಅದೃಷ್ಟ ತರುವುದಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಪ್ರಕರಣದ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬೀಳಲಿದೆ. ಸಿಎಂ ಬದಲಾವಣೆ ವಿಚಾರ ಇಲ್ಲವೇ ಇಲ್ಲ. ಹುದ್ದೆ ಖಾಲಿ ಇಲ್ಲದ ಕಾರಣ ಚರ್ಚೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಸಂಬಂಧ ಮಾಡುವ ಆಧಾರರಹಿತ ಆರೋಪ ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು. ದೇಶದಲ್ಲಿ ಕಾಂಗ್ರೆಸ್ ಅನ್ನು ದುರ್ಬೀನು ಹಾಕಿ ಹುಡುಕಬೇಕಾದ ಪರಿಸ್ಥಿತಿ ಇದೆ. ಪಂಜಾಬ್‌ನಲ್ಲಿ ಒಬ್ಬ ಸಿದ್ದು , ರಾಜ್ಯದಲ್ಲೊಬ್ಬ ಸಿದ್ದು ಸೇರಿಕೊಂಡು ಕಾಂಗ್ರೆಸ್ ಸರ್ವನಾಶ ಮಾಡುತ್ತಿದ್ದಾರೆ. ಇದನ್ನು ನಾನು ಈ ಹಿಂದೆಯೂ ಹೇಳಿದ್ದೆ. ಈಗ ಪುನರುಚ್ಚರಿಸುತ್ತಿದ್ದೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರ ನಡುವಿನ ಒಳಜಗಳ ತಾರಕಕ್ಕೇರಿದ್ದು ಆ ಪಕ್ಷದ ಸಭೆಯಲ್ಲೇ ಇದು ಸ್ಪಷ್ಟವಾಗಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ವೈಟ್‌ವಾಶ್ ಆಗಲಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಒಡೆದ ಮನೆಯಾಗಿದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಿಎಂ ಗಾದಿಯ ಕನಸು ಕಾಣಲಾರಂಭಿಸಿದ್ದಾರೆ. ಒಳ ಜಗಳಕ್ಕೆ ಕಾಂಗ್ರೆಸ್ ಬೆಲೆ ತೆರಲಿದೆ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಹುಮತ ಪಡೆಯಲು ಈಗಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಜಗದೀಶ್ ಶೆಟ್ಟರ್ ಮಾಜಿ ಸಿಎಂ