ತುಮಕೂರು : ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಅವಮಾನಿಸಿ ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ, ಕರ್ನಾಟಕದಲ್ಲಿಯೂ ಈಗ ಬಿ.ಎಸ್.ಯಡಿಯೂರಪ್ಪ ಅವರ ಸರದಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಇಬ್ಬರೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ವಿಭಾಗೀಯ ಮಟ್ಟದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ ಜೋಶಿ, ಜಸ್ವಂತ್ ಸಿಂಗ್. ಯಶವಂತ್ ಸಿನ್ಹಾ ಮತ್ತಿತರರ ನಾಯಕರನ್ನು ನಡೆಸಿಕೊಂಡಿದ್ದು ನಮ್ಮ ಕಣ್ಣಮುಂದೆಯೇ ಇದ್ದು ಕರ್ನಾಟಕದಲ್ಲಿಯೂ ಆರಂಭವಾಗಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಜನರು ಬಯಸಿದ್ದಲ್ಲ, ಹೈಜಾಕ್ ಮಾಡಿಕೊಂಡಿದ್ದು, ಭ್ರಷ್ಟಾಚಾರದ ಕಾರಣಕ್ಕೆ ದೇಶದಲ್ಲಿಯೇ ಕುಖ್ಯಾತಿ ಪಡೆದಿದೆ, ಇಂತಹ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ನಾಯಕರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ತಾಲೂಕು ಹಾಗೂ ಜಿಪಂ ಚುನಾವಣೆಗಳನ್ನು ಯಾವಾಗ ಮಾಡಬೇಕು ಎಂದು ನಿರ್ಧರಿಸುವುದು ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಿದ ನಂತರ ದಿನಾಂಕ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಡಿಸೆಂಬರ್ ಒಳಗೆ ಚುನಾವಣೆ ನಡೆಯುವ ನಿರೀಕ್ಷೆಯಿದ್ದು ಸಿದ್ಧತೆ ಆರಂಭವಾಗಿದೆ ಎಂದರು.
ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯತಂತ್ರಗಳು ಹಾಗೂ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳು, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹ ಹೀಗೆ ಮುಂತಾದ ಉದ್ದೇಶಗಳೊಂದಿಗೆ ಐದು ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಶಾಸಕ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ವೀರಪ್ಪಮೊಯ್ಲಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಈಶ್ವರ ಖಂಡ್ರೆ ಮತ್ತಿತರರು ಇದ್ದರು.
ಕಾಂಗ್ರೆಸ್ ತೊಲಗಲಿ ಎಂದ ಸಿದ್ದರಾಮಯ್ಯ!: ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ತೆಗೆಯಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಾಯ್ತಪ್ಪಿ ಹೇಳಿದರು. ಪಕ್ಷದ ಇತರ ಮುಖಂಡರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು. ಕಾಂಗ್ರೆಸ್ ತೆಗೆಯಬೇಕು ಎಂದು ಎರಡು ಸಲ ಹೇಳಿದರು. ಕೂಡಲೇ ತಪ್ಪು ತಿದ್ದಿಕೊಂಡ ಅವರು ಭ್ರಷ್ಟ ಬಿಜೆಪಿಯನ್ನು ತೊಲಗಿಸಬೇಕು, ಕಾಂಗ್ರೆಸ್ ಅಧಿಕಾರದಲ್ಲಿಲ್ಲವಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕುಣಿಗಲ್ ಟಿಕೆಟ್ ಬೇಡಿಕೆ ಇಟ್ಟ ಎಸ್ಪಿಎಂ : ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸಭೆೆಗೆ ಹಾಜರಾಗುವ ಮೂಲಕ ಕುತೂಹಲಕ್ಕೆ ಉತ್ತರ ನೀಡಿದರು. ರಾಜ್ಯ ಉಸ್ತುವಾರಿ ರಂದೀಪ್‌ಸಿಂಗ್ ಸುರ್ಜೇವಾಲ ಜತೆ ಎಸ್ಪಿಎಂ ಮಾತನಾಡಿದ್ದು, ಖುದ್ದು ರಾಹುಲ್‌ಗಾಂಧಿ ನೀಡಿರುವ ಸೂಚನೆಯನ್ನು ತಲುಪಿಸಿದರು ಎನ್ನಲಾಗಿದೆ. ಪಕ್ಷದ ಚಟುವಟಿಕೆ ಯಲ್ಲಿ ಸಕ್ರಿಯರಾಗಬೇಕು ಎಂದು ಮನವಿ ಮಾಡಿದ್ದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಎಸ್ಪಿಎಂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಾಲಿ ಸಂಸದನಾಗಿದ್ದಾಗಲೇ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಾದರೂ ಕುಣಿಗಲ್ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸುತ್ತೇನೆ. ಬೆಂಬಲಿಗರ ಹಿತಕಾಯಲು ಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯವಾಗಿದ್ದು, ತೀರ್ಮಾನ ನಿಮಗೆ ಬಿಟ್ಟಿದ್ದೇನೆ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ ಎನ್ನಲಾಗಿದೆ. ಸುರ್ಜೇವಾಲ ಕೂಡ ಸಕಾರಾತ್ಮಕ ಪ್ರತಿಕ್ರಿಯಿಸಿದ್ದು ಜಿಲ್ಲಾ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿಲ್ಲಾಮಟ್ಟದ ನಾಯಕರ ಜತೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರದ ವಿರುದ್ಧ ಜನರಿದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಬಡ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಭ್ರಷ್ಟಾಚಾರ ನಡೆಸುವ ಸರ್ಕಾರ ಜನರಿಂದ ಆಯ್ಕೆಯಾಗಿಲ್ಲ. ಇದು ಅನೈತಿಕತೆಯಿಂದ ಅಧಿಕಾರಕ್ಕೆ ಬಂದಿದ್ದು ಹೆಚ್ಚು ದಿನ ಬಾಳಲಾರದು. ರಂದೀಪ್ ಸುರ್ಜೇವಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ