ಮಾಲೂರು: ಶಾಸಕ ಕೆ.ವೈ.ನಂಜೇಗೌಡ ಮತ್ತು ಸಂಸದ ಮುನಿಸ್ವಾಮಿಗೆ ಪ್ರತಿಷ್ಠೆಯ ಚುನಾವಣೆಯಾದ ಮಾಲೂರು ಪುರಸಭೆ ಕಾಂಗ್ರೆಸ್ ವಶವಾಗಿದ್ದು, ಅಧ್ಯಕ್ಷರಾಗಿ ಎನ್.ವಿ.ಮುರಳೀಧರ್, ಉಪಾಧ್ಯಕ್ಷರಾಗಿ ಎ.ಜಿ.ಭಾರತಿ ಆಯ್ಕೆಯಾಗಿದ್ದಾರೆ.
ಒಟ್ಟು 27 ಸದಸ್ಯರ ಬಲವಿರುವ ಪುರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 10, ಜೆಡಿಎಸ್ 1, ಇತರ 5 ಸ್ಥಾನಗಳನ್ನು ಹೊಂದಿದ್ದು, ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಟೋಟಿ ಏರ್ಪಟ್ಟಿತ್ತು.
ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆಗೆ ನಿಗದಿಗೊಳಿಸಿದ್ದು, ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎನ್.ವಿ.ಮುರಳೀಧರ್ ಮತ್ತು ಬಿಜೆಪಿಯಿಂದ ಅನಿತಾ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷರ ಚುನಾವಣೆಯಲ್ಲಿ ಎನ್.ವಿ.ಮುರಳೀಧರ್ 15 ಮತ ಪಡೆದು ಜಯ ಗಳಿಸಿದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನಿತಾ 13 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಎ.ಜಿ.ಭಾರತಿ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಜುಳಾ ನಾಮಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ಎ.ಜಿ.ಭಾರತಿ 15 ಮತ ಪಡೆದು ಜಯಗಳಿಸಿದ್ದಾರೆ. 27 ಸದಸ್ಯರ ಪೈಕಿ 12ನೇ ವಾರ್ಡ್‌ನ ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಗೈರಾಗಿದ್ದು, ಉಳಿದ 26 ಸದಸ್ಯರು ಮತ್ತು ಶಾಸಕರು ಹಾಗೂ ಸಂಸದರು ಭಾಗವಹಿಸಿ ಮತ ಚಲಾಯಿಸಿದರು. ತಹಸೀಲ್ದಾರ್ ಮಂಜುನಾಥ್ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ ಆಚರಿಸಿದ ಶಾಸಕ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯುತ್ತಿದ್ದಂಥೆ ವಿಜಯೋತ್ಸವ ಆಚರಿಸಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ, ವಿರೋಧ ಪಕ್ಷದವರು ಹೇಳುವ ರೀತಿ ಕಾಂಗ್ರೆಸ್ ಬೇರೆ ಪಕ್ಷದ ಸದಸ್ಯರ ಕುದರೆ ವ್ಯಾಪಾರ ಮಾಡಲಿಲ್ಲ. ತಾಲೂಕಿನಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯ ಮನಗೊಂಡು ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ. ನಾವು ಯಾವುದೇ ಪಕ್ಷದ ಸದಸ್ಯರನ್ನು ಅಪಹರಣ ಮಾಡಿಲ್ಲ ಎಂದರು.
ಕಾಂಗ್ರೆಸ್ ವಾಮಮಾರ್ಗದ ಮೂಲಕ ಹಿಡಿದಿರುವ ಅಧಿಕಾರ ಹೆಚ್ಚುದಿನ ಉಳಿಯುವುದಿಲ್ಲ. ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀಗೆ ಕಾಂಗೆಸ್ ಆಮಿಷ ಒಡ್ಡಿ ಚುನಾವಣೆಯಲ್ಲಿ ಗೈರಾಗುವಂತೆ ಮಾಡಿದೆ ಮತ್ತು ಪಕ್ಷೇತರ ಸದಸ್ಯರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಈ ಅಧಿಕಾರ ಬಹಳ ದಿನ ಉಳಿಯುವುದಿಲ್ಲ. ಎಸ್.ಮುನಿಸ್ವಾಮಿ, ಸಂಸದ