ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ ಎಂದು ಆರೋಪಿಸಿ ನಗರಸಭೆ ಕಾಂಗ್ರೆಸ್ ಸದಸ್ಯರು ನಗರಸಭೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸದಸ್ಯ ಕಲೀಮ್ ಮಾತನಾಡಿ, 18 ತಿಂಗಳಿಂದ ನಗರಸಭೆಗೆ ಅಧ್ಯಕ್ಷರಿಲ್ಲ. ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಕೇವಲ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಖಾತೆ ಬದಲಾವಣೆ, ತಿದ್ದುಪಡಿ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಶಾಸಕರ ಮೂಲಕ ವಿತರಿಸಲಾಗುವುದು ಅದಕ್ಕಾಗಿ ವಿಳಂಬವಾಗುತ್ತಿದೆ ಎನ್ನುತ್ತಾರೆ. ಆದರೆ ಶಾಸಕರು ಎರಡು ಬಾರಿ ಸಭೆ ಕರೆದರೂ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಆಡಳಿತಾಧಿಕಾರಿಗಳೂ ಸದಸ್ಯರ ಸಭೆ ಕರೆದಿಲ್ಲ ಎಂದರು.
ಕಾಂಗ್ರೆಸ್ ಸದಸ್ಯರಿಗೆ ಕಿಂಚಿತ್ತೂ ಗೌರವವಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಸ್ಥಳೀಯ ಶಾಸಕರು ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಆದರೆ, ಸ್ಥಳೀಯವಾಗಿ ಕಾಂಗ್ರೆಸ್ ಸದಸ್ಯರಿಗೆ ಕಿಂಚಿತ್ತೂ ಗೌರವ ಇಲ್ಲದಂತಾಗಿದೆ ಎಂದು ಆರೋಪಿಸಿದ ಕಲೀಂ, ಜಿಲ್ಲಾಧಿಕಾರಿ ಹಾಗೂ ಶಾಸಕರು ತಕ್ಷಣ ಸದಸ್ಯರ ಸಭೆ ಕರೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತೆ ಡಿ.ಎಂ.ಗೀತಾ, ಖಾತೆ ವಿತರಣೆ ಆನ್‌ಲೈನ್ ಆಗಿದೆ. ಯಾವುದೇ ರೀತಿ ವಿಳಂಬವಾಗುವುದಿಲ್ಲ. ಸಣ್ಣಪುಟ್ಟ ದೋಷಗಳಿದ್ದಲ್ಲಿ ಸರಿಪಡಿಸಲಾಗುವುದು ಎಂದರು.
ಪ್ರತಿಭಟನಾಕಾರರೊಂದಿಗೆ ಚರ್ಚಿಸಿದ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಕೈ ಸದಸ್ಯರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸದಸ್ಯರಾದ ಆರ್.ಪಿ. ಗೋಪಿನಾಥ್, ಡಿ.ಎನ್. ವೆಂಕಟರೆಡ್ಡಿ, ಮಂಜುಳಮ್ಮ, ಶ್ರೀರಾಮಪ್ಪ, ಗಿರೀಶ್, ರಂಗಮ್ಮ ಮತ್ತಿತರರು ಭಾಗವಹಿಸಿದ್ದರು.
ನಗರಸಭೆಯಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದರೆ ಸಾಲದು. ಅರ್ಜಿದಾರ ಅಧಿಕಾರಿಗಳ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಡತವನ್ನೇ ನಾಪತ್ತೆ ಮಾಡುತ್ತಾರೆ. ಅರ್ಜಿದಾರ ಪದೇಪದೆ ಅರ್ಜಿ ಸಲ್ಲಿಸಿದರೂ ಕೆಲಸವಾಗುತ್ತಿಲ್ಲ. ಅಧಿಕಾರಿಗಳು ಪ್ರತಿಯೊಂದಕ್ಕೂ ನಗರಸಭೆ ಆಯುಕ್ತರನ್ನು ಕೇಳಿ ಎನ್ನುತ್ತಾರೆ. ಇಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ.
ಕಲೀಂ, ನಗರಸಭೆ ಸದಸ್ಯ