ಜಿಲ್ಲೆ

ಇಷ್ಟವಾಗುವ ವೃತ್ತಿ ಪ್ರೌವೃತ್ತಿಯಲ್ಲಿ ಸಾಧಿಸಿ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಗೀತೆಗಳನ್ನು ಹಾಡಿದ ನಂತರ ಆ ಗೀತೆಗಳ ಬಗ್ಗೆ ಕೇಳಿದ ಶೋತೃಗಳು ವ್ಯಾಖ್ಯಾನ ಮಾಡಿದರೆ ತಮ್ಮ ಅಭಿಪ್ರಾಯದ ಮೂಲಕ ವಿಭಿನ್ನ ದೃಷ್ಟಿ ಕಾಣಬಹುದಾಗಿದೆ. ಪ್ರತಿಯೊಬ್ಬರೂ ತಮಗೆ ಇಷ್ಟವಾಗುವ ವೃತ್ತಿ ಹಾಗೂ ಪ್ರೌವೃತ್ತಿಗಳಲ್ಲಿ ಶ್ರದ್ದೆಯಿಂದ ಸಾಧನೆ ಮಾಡಬೇಕು ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಹೇಳಿದರು.

ಮಹಾರಾಷ್ಟ್ರ-ತೆಲಂಗಾಣ-ಗೋವಾ-ಆಂಧ್ರ ಹಾಗೂ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಂಧ್ರದ ಮಂತ್ರಾಲಯದ ರಾಘವೇಂದ್ರ ಮಠದ ಆವರಣದಲ್ಲಿ ನಡೆಯುತ್ತಿರುವ ಪ್ರಥಮ ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಂಗೀತ ಮನುಷ್ಯನ ಜೀವನದಲ್ಲಿ ಅವಿಭಾಜ್ಯಅಂಗವಾಗಿದ್ದು, ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಮನಸ್ಸಿಗೆ ನೆಮ್ಮದಿ ಹಾಗೂ ಮುದ ನೀಡುತ್ತದೆ. ಸಂಗೀತಕ್ಕೆ ಮನಸೋಲದವರು ತೀರಾ ವಿರಳ. ಮಾತಿನಲ್ಲಿ ಹೇಳಲಾಗದ್ದನ್ನು ಸಂಗೀತದ ಮೂಲಕ ಹೇಳಬಹುದು ಎಂದರು.

ಪ್ರತಿಭಾಂಜಲಿ ಡೇವಿಡ್, ಧರಸಗುಪ್ಪೆ ಧನಂಜಯ, ಸಂತೋಷ್, ಧನಂಜಯ, ಅಮೃತಾ, ವಿಶ್ವಾಸ್, ಐಶ್ವರ್ಯಾ, ಹಂಸಾ, ಶಶಿಕಲಾ, ಸರಿತ, ಭಾರತಿ, ಕರಣ್‌ವೀರ್ ಇತರರಿದ್ದರು. ಇದೇ ವೇಳೆ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರಿಗೆ ಇಷ್ಟವಾದ ಕೆಲವು ಗೀತೆ ಹಾಡುವ ಮೂಲಕ ಗೀತೆ ಅಭಿನಂದನೆ ಸಲ್ಲಿಸಲಾಯಿತು.