ಜಿಲ್ಲೆ

ಸದೃಢ ಭಾರತ ನಿಮಾರ್ಣಕ್ಕೆ ಶಿಕ್ಷಣವೇ ಅಡಿಪಾಯ: ಯಶ್ಪಾಲ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶದ ಭವಿಷ್ಯ ಬರೆಯಲಿರುವ ವಿದ್ಯಾವಂತ ಯುವ ಜನಾಂಗ ಮಾತ್ರ ಸದೃಢ ಭಾರತ ನಿಮಾರ್ಣಕ್ಕೆ ಶಕ್ತಿ ತುಂಬಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಸಾಧನೆ ಇದೇ ರೀತಿ ನಿರಂತರವಾಗಿ ಮುಂದುವರೆದು ಇತರರಿಗೂ ಮಾದರಿಯಾಗಲಿ ಎಂದು ಪುಷ್ಪಾನಂದ ಫೌಂಡೇಶನ್​ ಪ್ರವರ್ತಕ ಹಾಗೂ ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಪುಷ್ಪನಂದ ಫೌಂಡೇಶನ್​ ವತಿಯಿಂದ ಆಯೋಜಿಸಿದ್ದ ಎಸ್​.ಎಸ್​. ಎಲ್​. ಸಿ. ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ಶಿಕ್ಷಣ ಸಂಸ್ಥೆಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಉಡುಪಿ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸುವ ಕೆಲಸ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಪರಿಶ್ರಮದಿಂದ ಯಶಸ್ವಿಯಾಗಿದೆ ಎಂದರು .

ಮುಖ್ಯ ಅತಿಥಿಯಾಗಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ನಿವೃತ್ತ ಪ್ರಾಂಶುಪಾಲೆ ಹಂಸಾವತಿ, ತಾರಾದೇವಿ, ಸಮಾಜ ಸೇವಕಿ ನಿರುಪಮಾ ಪ್ರಸಾದ್​ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುಷ್ಪಾನಂದ ಫೌಂಡೇಶನ್​ ವತಿಯಿಂದ ಶೇ, 100 ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನಾ ಪತ್ರದೊಂದಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.