ಜಿಲ್ಲೆ

ನಿಸ್ವಾರ್ಥ ಸೇವೆ, ಸಮರ್ಪಣಾ ಭಾವ ಶ್ಲಾಘನೀಯ : ಡಾ.ಎಚ್.ಆರ್.ತಿಮ್ಮಯ್ಯ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವಿಪತ್ತಿನ ಸಮಯದಲ್ಲಿ ತ್ವರಿತ ಮತ್ತು ನಿಸ್ವಾರ್ಥ ಸೇವೆ ನೀಡಿದ ಸ್ವಯಂಸೇವಕರ ಸಮರ್ಪಣಾ ಮನೋಭಾವ ಹಾಗೂ ದೃಢ ನಿರ್ಧಾರದ ಪ್ರಯತ್ನ ಶ್ಲಾಘನೀಯ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದರು.

ಮೇ 30ರಂದು ಮಂಜನಾಡಿ ಗ್ರಾಮದಲ್ಲಿ ಸಂಭವಿಸಿದ್ದ ಮಳೆ ದುರಂತ ಸಂದರ್ಭ ರಕ್ಷಣಾ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸ್ವಯಂಸೇವಕರನ್ನು ನಿಟ್ಟೆ(ಪರಿಗಣಿತ) ವಿಶ್ವವಿದ್ಯಾಲಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡಮಿ ವತಿಯಿಂದ ದೇರಳಕಟ್ಟೆಯಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಚಾಲಕರ ಸಹಿತ 30 ಸ್ವಯಂಸೇವಕರನ್ನು ಸನ್ಮಾನಿಸಲಾಯಿತು. ಕ್ಷೇಮ ಅಕಾಡೆಮಿ ಡೀನ್ ಡಾ.ಸಂದೀಪ್ ರೈ, ಉಪಡೀನ್ ಡಾ.ಸುಕನ್ಯಾ ಶೆಟ್ಟಿ, ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಿಟ್ಟೆ ವಿವಿ ಅರಿವಳಿಕೆಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಪಾದ ಮೆಹಂದಳೆ ಸ್ವಾಗತಿಸಿದರು. ಪ್ಯಾಥೋಲಾಜಿ ವಿಭಾಗದ ಪ್ರಾಧ್ಯಾಪಕ ಪ್ರೊ.ಕಿಶನ್ ಪ್ರಸಾದ್ ಎಚ್.ಎಲ್. ವಂದಿಸಿದರು. ಅರಿವಳಿಕೆ ವಿಭಾಗದ ಡಾ.ನಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.