ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಧರ್ಮಶ್ರದ್ಧೆ ಕುಂಠಿತವಾಗುತ್ತಿದೆ ಎನ್ನುವ ಅಪವಾದಗಳನ್ನೆಲ್ಲ ಮೀರಿ ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ನಡೆದ ಬ್ರಹ್ಮಕಲಶೋತ್ಸವ ಆಶಾದಾಯಕ, ಚೇತೋಹಾರಿ, ಧಾರ್ಮಿಕ ಶ್ರದ್ಧೆ, ಸಮರ್ಪಣಾ ಭಾವದ ಪ್ರತೀಕವಾಗಿ ಕಾಣಿಸಿಕೊಂಡಿದೆ. ಬ್ರಹ್ಮಕಲಶಕ್ಕೆ ಭಕ್ತರು ಹೇಗೆ ಸಹಕಾರ ನೀಡಿದರೋ ಅದೇ ರೀತಿಯಲ್ಲಿ ದೇವಳದ ಕೆರೆಗೆ ಕಾರ್ಯಕಲ್ಪ, ಭೂಮಂಡಲ ರಥ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಕ್ಷೇತ್ರ ಪುತ್ತಿಗೆ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ಮೋಹನ ಆಳ್ವ ಹೇಳಿದರು.
ಬ್ರಹ್ಮಕಲಶೋತ್ಸವ ನಡೆದ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ ಎಂ. ಮಾತನಾಡಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು, ಕರಸೇವಕರು, ಸ್ವಯಂಸೇವಕರು, ದಾನಿಗಳು, ಕೆಲವು ಕಾಮಗಾರಿ ಹಾಗೂ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಂಡವರು, ವಾಸ್ತುತಜ್ಞರು, ಶಿಲ್ಪಿಗಳು, ಕುಶಲಕರ್ಮಿಗಳು, ವೈದಿಕರು, ಸರ್ಕಾರ, ಮಾಧ್ಯಮ ಸಹಿತ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಅಭಿನಂದಿಸಿದರು.
ಮಾಜಿ ಸಚಿವ, ಸಮಿತಿ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ, ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ದಿ. ಅಮರನಾಥ ಶೆಟ್ಟಿ ಅವರ ಮುಂದಾಳತ್ವ, ಸೇತುವೆ ಇತ್ಯಾದಿ ತುರ್ತು ಕಾಮಗಾರಿಗಳನ್ನು ಮುತುವರ್ಜಿಯಿಂದ ನಿರ್ವಹಿಸಿದ ಶಾಸಕ ಉಮಾನಾಥ ಕೋಟ್ಯಾನ್, ಕಟ್ಟಡಗಳ ಪ್ರಾಯೋಜಕರು, ಆಳ್ವಾಸ್ ಸಹಿತ ವಿವಿಧ ಸಂಘ-ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ಪ್ರಧಾನ ಅರ್ಚಕ ಅನಂತ ಕೃಷ್ಣ ಭಟ್, ಕೋಶಾಧಿಕಾರಿ ಶ್ರೀಪತಿ ಭಟ್, ಕಾರ್ಯದರ್ಶಿಗಳಾದ ವಿದ್ಯಾರಮೇಶ ಭಟ್, ವಾದಿರಾಜ ಮಡ್ಮಣ್ಣಾಯ, ಚಂದ್ರಶೇಖರ ಎಂ., ಕಾರ್ಯಾಧ್ಯಕ್ಷ ನೀಲೇಶ ಶೆಟ್ಟಿ, ಉಪಾಧ್ಯಕ್ಷರಾದ ಶಿವಪ್ರಸಾದ ಆಚಾರ್ ಕುಂಗೂರು, ಜಿ.ಉಮೇಶ ಪೈ, ಜಗದೀಶ ಅಧಿಕಾರಿ, ಬೊಕ್ಕಸ ಚಂದ್ರಶೇಖರ ರಾವ್, ಸಂಚಾಲಕರಾದ ಧನಕೀರ್ತಿ ಬಲಿಪ, ಸುದರ್ಶನ ಎಂ., ನಾಗರಾಜ ಪೂಜಾರಿ, ನಾರಾಯಣ ಪಿ.ಎಂ. ಉಪಸ್ಥಿತರಿದ್ದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು
ಸ್ಮರಣಿಕೆ ವಿತರಣೆ
ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸುಮಾರು 2000 ಮಂದಿ ಸ್ವಯಂಸೇವಕರು, ಕರಸೇವಕರು, ದಾನಿಗಳು, ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅಕ್ಕಿ, ಬೆಲ್ಲ, ಸ್ಮರಣಿಕೆ ವಿತರಿಸಲಾಯಿತು.
ಪುತ್ತೆ ಬ್ರಹ್ಮಕಲಶ ಐತಿಹಾಸಿಕ ಕಾರ್ಯ. ಎಲ್ಲ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಿದವರು ಮುಗ್ಧತೆ, ಭಕ್ತಿಭಾವದಿಂದ ಹೇಳುತ್ತಿರುವುದು ನಿಜಕ್ಕೂ ಶತಾಂಶ ಸತ್ಯವಾದ ವಿಚಾರವಾಗಿದೆ. ಕಲದೀಪ ಎಂ., ಆನುವಂಶಿಕ ಮೊಕ್ತೇಸರ, ಶ್ರೀ ಕ್ಷೇತ್ರ ಪುತ್ತಿಗೆ https://www.vijayavani.net/mangalore-sharavu-angaraka-sankastahara-chathurthi https://www.vijayavani.net/street-trading