ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡರು ಅನೇಕ ಶಿಷ್ಯರನ್ನು ಬೆಳೆಸಿದ್ದಾರೆ. ಅಂತಹವರ ಸಾಲಿನಲ್ಲಿ ಪ್ರೊ.ಬಿ.ಜಯಪ್ರಕಾಶಗೌಡರು ಸಹ ಒಬ್ಬರು. ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿರುವ ಜೆಪಿ, ಶಂಕರಗೌಡರು ನಡೆದ ದಾರಿಯಲ್ಲಿ ಸಾಗುತ್ತಾ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕೃತ ಪ್ರೊ.ಬಿ.ಜಯಪ್ರಕಾಶಗೌಡ ಹಾಗೂ ಮತ್ತೆ ಮತ್ತೆ ಶಂಕರಗೌಡ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮುದ್ರಣ ಸೊಗಸು ಬಹುಮಾನ ಪುರಸ್ಕೃತ ಎನ್.ನಾಗರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ನಿತ್ಯ ಸಚಿವ ಕೆ.ವಿ.ಶಂಕರಗೌಡರ ದೂರದೃಷ್ಟಿಯ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಜೆಪಿ ಪಾತ್ರ ಮಹತ್ವವಾದದ್ದು ಎಂದು.
ಜೆಪಿ ಕರ್ನಾಟಕ ಸಂಘದ ಅಧ್ಯಕ್ಷರಾದ ನಂತರ ಸದಾ ಚಟುವಟಿಕೆ ನಡೆಯುತ್ತಲೇ ಇವೆ. ಕೆ.ವಿ.ಎಸ್ ಭವನದ ಕಟ್ಟಡ ನಿರ್ಮಾಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವನಾಗಿ ಒಂದು ಕೋಟಿ ರೂ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಬದಲಾದರ ರಾಜಕೀಯ ಪರಿಸ್ಥಿತಿಯಲ್ಲಿ ಅದನ್ನು ಶ್ರೀಕಂಠೇಗೌಡರು ಮುಂದುವರಿಸಿ ಸಂಪೂರ್ಣವಾಗುವಂತೆ ನೋಡಿಕೊಂಡರು. ಅದೇ ರೀತಿಯ ರೈತ ಸಭಾಂಗಣದಲ್ಲಿ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ನಾನು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದೆವು. ಆ ಸಂದರ್ಭದಲ್ಲೇ ಕೆ.ವಿ.ಶಂಕರಗೌಡರು ರಾಜ್ಯದಲ್ಲೇ ಮಾದರಿಯಾದ ರೈತ ಭವನ ನಿರ್ಮಾಣ ಮಾಡಿದ್ದಾರೆ. ಅದರ ಪುನರ್ ನವೀಕರಣ ಮಾಡಲಿಲ್ಲ ಎಂದು ಜಯಪ್ರಕಾಶಗೌಡರು ಬೇಸರ ಹೊರಹಾಕಿದರು. ಅಂದೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ 4.28 ಕೋಟಿ ರೂ ಸಿಎಸ್‌ಆರ್ ಅನುದಾನದಲ್ಲಿ ನವೀಕರಣಕ್ಕೆ ಯೋಜನೆ ರೂಪಿಸಲಾಯಿತು. 2 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದು ಹೇಳಿದರು.
ಜಯಪ್ರಕಾಶಗೌಡರ ಮತ್ತೊಂದು ಕನಸಾಗಿರುವ ಕರ್ನಾಟಕ ಸಂಘವನ್ನು ಇಡೀ ರಾಜ್ಯದಲ್ಲೇ ಮಾದರಿ ಸಂಘವನ್ನಾಗಿ ಮಾಡಬೇಕೆಂಬುದಾಗಿದೆ. ಜತೆಗೆ ಸಭಾಂಗಣ ನಿರ್ಮಾಣವಾಗುತ್ತಿದ್ದು, ಶೀಘ್ರ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭಿಸುವಂತಾಗಲಿ. ಇದಕ್ಕೂ ಸಹ ಕುಮಾರಸ್ವಾಮಿ ಅವರ ಅನುದಾನ ಕೊಡಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸಿ.ಎಸ್.ಪುಟ್ಟರಾಜು, ಪುಸ್ತಕ ಮುದ್ರಣ ಸೊಗಸು ಬಹುಮಾನ ಪುರಸ್ಕೃತ ನಾಗರಾಜು ಅವರು ಸಹ ಅವರ ಕ್ಷೇತ್ರದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಿ ಎಂದು ಶುಭ ಕೋರಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ತಗ್ಗಹಳ್ಳಿ ವೆಂಕಟೇಶ್, ಹರೀಶ್‌ಕುಮಾರ್, ಲೋಕೇಶ್, ನಾಗಪ್ಪ, ಸೋಮಶೇಖರ್, ಮಂಜುಳಾ ಉದಯಶಂಕರ್ ಇತರರಿದ್ದರು.