ಮಂಡ್ಯ: ದೇಶದಲ್ಲಿ ಸಮ ಸಮಾಜ ನಿರ್ಮಾಣಕ್ಕೆಂದು ಮುಂದಾದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೋವನ್ನು ಹಲವರು ನೀಡಿದರು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಷಾದಿಸಿದರು.
ತಾಲೂಕಿನ ಕಾಗೆ ಮಂಟಿ ಗ್ರಾಮದ ಬೋರೆಗುಡ್ಡದ ಚಾರ್ವಾಕ ವೈಚಾರಿಕ ಮಹಾ ಮನೆಯಲ್ಲಿ ಚಾರ್ವಾಕ ವೈಚಾರಿಕ ಸಂಸ್ಥೆಯಿಂದ ಆಯೋಜಿಸಿದ್ದ ‘ಧಮನಿತರ ಬಂಗಾರದ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಹಕ್ಕು ಸಿಗಬೇಕೆಂದು ಹೋರಾಟ ಮಾಡಿದ ಬುದ್ಧನಿಗೆ ಅವಕಾಶ ಸಿಗಲಿಲ್ಲ. ಅಂತರ್ಜಾತಿ ವಿವಾಹ ಮಾಡಲು ಬಸವಣ್ಣ ಮುಂದಾದ ಸಂದರ್ಭದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಮಹನೀಯರ ಇತಿಹಾಸವನ್ನು ಅರಿತು ಅವರಂತೆ ನಡೆಯಬೇಕಿದೆ. ಧಮನಿತರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸಬೇಕು. ಈ ನಿಟ್ಟಿನಲ್ಲಿ ಚಾರ್ವಾಕ ವೈಚಾರಿಕ ಸಂಸ್ಥೆ ಪ್ರಯೋಗಶೀಲ ಪ್ರಯತ್ನ ಮಾಡುತ್ತಿದೆ. ಅವರ ಜತೆಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಮನಸ್ಮೃತಿ ವರ್ಸಸ್ ಭಾರತ ಸಂವಿಧಾನ ಎಂಬ ನಾಟಕ ಪ್ರದರ್ಶಿಸುವ ಮೂಲಕ ಜನರಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಎಲ್ಲರಿಗೂ ಹಕ್ಕು ಸಿಗುವಂತಾಗಬೇಕು ಎಂಬ ಕಾರಣಕ್ಕೆ ಮೊದಲ ಬಾರಿಗೆ ಹೋರಾಟ ಮಾಡಿದ ಬುದ್ಧ ಅವರಿಗೆ ನೆಲೆ ನಿಲ್ಲಲು ಅವಕಾಶ ನೀಡಲಿಲ್ಲ. ಅದೇ ರೀತಿ ಬಸವಣ್ಣ ಕೂಡ ಅಂತರ್ಜಾತಿ ವಿವಾಹ ಮಾಡಲು ಮುಂದಾದರು. ಅದರಿಂದ ಅವರು ಸ್ಥಾನ ಕಳೆದುಕೊಳ್ಳಬೇಕಾಯಿತು. ಸಮ ಸಮಾಜ ನಿರ್ಮಾಣಕ್ಕೆ ಮುಂದಾದ ಅಂಬೇಡ್ಕರ್ ಸಹ ಏನೆಲ್ಲಾ ಅನುಭವಿಸಿದರು ಎಂಬುದನ್ನು ನೋಡಿದ್ದೇವೆ ಎಂದು ತಿಳಿಸಿದರು.
ಪ್ರತಿ ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು. ಇದಕ್ಕೂ ಮುನ್ನ ಮಹಾನ್ ನಾಯಕರ ಇತಿಹಾಸವನ್ನು ತಿಳಿದು ಮೈಗೂಡಿಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕು. ಅವಕಾಶಗಳು ಸಿಕ್ಕ ಸಂದರ್ಭದಲ್ಲಿ ಎಲ್ಲರ ಸಹಕಾರ ಪಡೆದು ಅದನ್ನು ಕಾರ್ಯರೂಪಕ್ಕೆ ತರಬೇಕು. ಎಲ್ಲಿಯವರೆಗೆ ಸಹಕಾರ ಸಿಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಯಶಸ್ವಿಯಾಗುವುದಿಲ್ಲ. ಸೌಲಭ್ಯಕ್ಕಾಗಿಯೇ ನಿರಂತರ ಹೋರಾಟ ಮಾಡುತ್ತಿದ್ದೇವೆ. ಈ ಸಂಸ್ಥೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ನಮ್ಮ ಸಹಕಾರ ಇರುತ್ತದೆ. ಜತೆಗೆ ಸ್ಥಳೀಯ ಶಾಸಕರು ಸಹ ಇದ್ದಾರೆ. ಅಲ್ಲದೆ ಸರ್ಕಾರದ ವತಿಯಿಂದ ಅಗತ್ಯವಾಗಿರುವ ಸೌಲಭ್ಯಗಳನ್ನು ಖಂಡಿತವಾಗಿ ಕೊಡಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭವರಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೆಳಮಟ್ಟದ ಕೆಲವು ಸಮುದಾಯಗಳು ಶೋಷಣೆಗೆ ಒಳಗಾಗಿವೆ. ಆ ಸಮುದಾಯದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಚಾರ್ವಾಕ ಸಂಸ್ಥೆಯರು ಉತ್ತಮ ಕೆಲಸ ಮಾಡಲು ಹೊರಟಿದ್ದಾರೆ. ನಮಗೂ ಕೂಡ ಅವಕಾಶ ಸಿಕ್ಕಿದ್ದು, ಸಮಾಜ ಬದಲಾವಣೆ ಮಾಡಿ ಸಮ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದೋಣ ಎಂದು ಮನವಿ ಮಾಡಿದರು.
ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಹೀಂ, ನಿವೃತ್ತ ಇಂಜಿನಿಯರ್ ಚಂದ್ರಹಾಸ, ಬೌದ್ಧ ಬಿಕ್ಕು ಮನೋರಖ್ಖಿತ ಬಂತೇಜಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದೇವರಾಜು ಕೊಪ್ಪ, ಚಾರ್ವಾಕ ಸಂಸ್ಥೆ ಅಧ್ಯಕ್ಷ ಮಾಚಹಳ್ಳಿ ಗಿರೀಶ್, ಮುಖಂಡರಾದ ಮಾಚಹಳ್ಳಿ ಪರಮೇಶ್, ರಾಮಚಂದ್ರಪ್ಪ ಭಾಗವಹಿಸಿದ್ದರು. ಇದೇ ವೇಳೆ ಮನು ಸ್ಮತಿ ವರ್ಸಸ್ ಭಾರತ ಸಂವಿಧಾನ ನಾಟಕ ಎರಡು ಗಂಟೆಯ ಪ್ರದರ್ಶನ ನಡೆಯಿತು.