ಜಿಲ್ಲೆ

ಉತ್ತಮ ಹವ್ಯಾಸ ಆರೋಗ್ಯಕ್ಕೆ ಪೂರಕ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಉತ್ತಮ ಹವ್ಯಾಸ ಆರೋಗ್ಯಕ್ಕೆ ಪೂರಕ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಚಿಕ್ಕಸ್ವಾಮಿ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದರು. ಚಿಕ್ಕಸ್ವಾಮಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗದೇ ಹತ್ತು ಹಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಲೇಖಕ, ಕವಿ, ಪರಿಸರವಾದಿ ಜತೆಗೆ ಲಯನ್ಸ್ ಸಂಸ್ಥೆಯ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದರು.

ಚಿಕ್ಕಸ್ವಾಮಿ ಅವರದು ರೋಚಕ ಬದುಕು. ಮತ್ತೆ ಮತ್ತೆ ಪರೀಕ್ಷೆ ಬರೆದರು. ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಾ ಬಂದರು. ಜಿಲ್ಲಾ ಉದ್ಯೋಗ ಅಧಿಕಾರಿಯಾಗಬಹುದಾದರೂ ಶಿಕ್ಷಣ ಇಲಾಖೆಯ ಮೇಲೆ ಬಹಳವಾಗಿ ಪ್ರೀತಿ ಇಟ್ಟುಕೊಂಡು ಮತ್ತೆ ಕೆಇಎಸ್ ಪರೀಕ್ಷೆ ಬರೆದು ಶಿಕ್ಷಣಾಧಿಕಾರಿಯಾದರು. ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿತ್ತು. ತಮ್ಮ ನಿರಂತರ ಚಟುವಟಿಕೆಗಳ ಮೂಲಕ ತಮ್ಮ ವ್ಯಕ್ತಿತ್ವ ಗಟ್ಟಿ ಮಾಡಿಕೊಂಡು ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 33 ವರ್ಷ ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಜೀವನ ನಡೆಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಬೀಳ್ಕೊಡುಗೆ ನೀಡುತ್ತಿರುವುದು ಅಭಿನಂದನೀಯ ಎಂದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ರೈತ ಕುಟುಂಬದಿಂದ ಗ್ರಾಮಾಂತರ ಪ್ರದೇಶದಿಂದ ಬಂದು ತಾವು ಮಾಡಿದ ಸಾಧನೆ, ಕೊಟ್ಟಂತ ಸೇವೆ ಉತ್ತಮ ವಾದಂತಹ ಸೇವೆ ಅಭಿನಂದಿಸುತ್ತೇನೆ.

ಅಬಕಾರಿ ಇಲಾಖೆ ಜಂಟಿ ಆಯುಕ್ತ ಎ.ಎಲ್.ನಾಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನೆ ಸ್ವೀಕರಿಸಿ ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಕೃತಜ್ಞತಾ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಶ್ವೇತಾ ಇತರರಿದ್ದರು.