ಜಿಲ್ಲೆ

ಬಿಲಾಯ್ ಕನ್ನಡ ಸಂಘದಿಂದ ಕೇಂದ್ರ ಸಚಿವ ಎಚ್‌ಡಿಕೆಗೆ ಅಭಿನಂದನೆ

ಬೆಂಗಳೂರು: ಛತ್ತಿಸಗಢ ಬಿಲಾಯ್​ನಲ್ಲಿರುವ ಉಕ್ಕು ಕಾರ್ಖಾನೆ ಭೇಟಿಗೆ ಆಗಮಿಸಿದ್ದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಿಲಾಯ್ ಕನ್ನಡ ಸಂಘದ ಸದಸ್ಯರು, ಸಚಿವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ನಾಗನಾರ್ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ನಂತರ ಸೋಮವಾರ ಸಂಜೆ ಬಿಲಾಯ್ಗೆ ಆಗಮಿಸಿದ ಸಚಿವರನ್ನು ಕಾರ್ಖಾನೆಯ ಅತಿಥಿಗೃಹದಲ್ಲಿ ಕನ್ನಡ ಸಂಘದ ಸದಸ್ಯರು ಭೇಟಿ ಮಾಡಿದರು.

ನಿಮ್ಮ ತಂದೆಯವರು ಪ್ರಧಾನಿ ಆಗಿದ್ದರು. ನೀವು ಉಕ್ಕು ಸಚಿವರಾಗಿ ಬಿಲಾಯ್ ಕಾರ್ಖಾನೆಗೆ ಬಂದಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಹಿರಿಯರು ಈ ಕಾರ್ಖಾನೆಗೆ ಉದ್ಯೋಗ ಅರಸಿ ಬಂದಿದ್ದರು. ಈಗ 3ನೇ ತಲೆಮಾರಿನ ಕನ್ನಡಿಗರು ಬಿಲಾಯ್ನಲ್ಲಿಯೇ ನೆಲೆಸಿದ್ದಾರೆ ಎಂದು ಸಂಘದ ಸದಸ್ಯರಯ ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಸಚಿವರು ಭಾರೀ ಸಂತಸ ವ್ಯಕ್ತಪಡಿಸಿದರು.

ಕನ್ನಡ ಮರೆತಿಲ್ಲ, ಮಕ್ಕಳಿಗೂ ಭಾಷೆ ಕಲಿಸಿದ್ದೇವೆ:

ಇದೇ ವೇಳೆ ಸಚಿವರೊಂದಿಗೆ ಮಾತನಾಡಿದ ಸಂಘದ ಪದಾಧಿಕಾರಿಗಳು, ನಾವು ಕರ್ನಾಟಕದಿಂದ ಬಹಳ ದೂರ ಇದ್ದರೂ ಕನ್ನಡ, ಕನ್ನಡತನದಿಂದ ವಿಮುಖರಾಗಿಲ್ಲ. ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತೇವೆ. ನಮ್ಮ ಮಕ್ಕಳು ಈಗ ಇಲ್ಲಿ 3ನೇ ತಲೆಮಾರಾಗಿದ್ದು, ಅವರಿಗೂ ಕನ್ನಡ ಕಲಿಸಿದ್ದೇವೆ. ಮೊದಲ ತಲೆಮಾರಿನ ನಂತರ ಎರಡನೇ ತಲೆಮಾರು, ಮೂರನೇ ತಲೆಮಾರು ಕೂಡ ಬಿಲಾಯ್ನಲ್ಲಿಯೇ ನೆಲೆಗೊಂಡಿದ್ದೇವೆ ಎಂದು ಹರ್ಷವನ್ನು ಹಂಚಿಕೊಂಡರು.

ನಿಯೋಗದಲ್ಲಿ ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್‌ಬಾಬು, ನಂದಕುಮಾರ್, ಸುಚಿತ್ರಾ, ಚಂದ್ರಲತಾ ಇದ್ದರು.