ಕಾಸರಗೋಡು: ಉತ್ತರ ಭಾರತದ ಬದರೀನಾಥದಿಂದ ಕಾಲ್ನಡಿಗೆ ಮೂಲಕ ಶಬರಿಮಲೆಗೆ ಸುಮಾರು 8 ಸಾವಿರ ಕಿ.ಮೀ. ದೂರ ಕ್ರಮಿಸಿ ದೇವರ ಹಾಗೂ ಮಕರಜ್ಯೋತಿ ದರ್ಶನ ಪಡೆದು ವಾಪಸಾಗಿರುವ ಕೂಡ್ಲು ರಾಮದಾಸ್ ನಗರ ನಿವಾಸಿಗಳಾದ ಸನತ್ ಕುಮಾರ್ ನಾಯ್ಕ ಮತ್ತು ಸಂಪತ್ ಕುಮಾರ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಿತು.
ದೀರ್ಘಕಾಲದ ಕಠಿಣಯಾತ್ರೆ ಮುಗಿಸಿ ಕಾಸರಗೋಡು ರೈಲ್ವೆ ನಿಲ್ದಾಣ ತಲುಪಿದ ಅವರನ್ನು ವಿಶ್ವ ಹಿಂದು ಪರಿಷತ್ ಕಾಸರಗೋಡು ನಗರ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ನಂತರ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಶ್ವ ಹಿಂದು ಪರಿಷತ್ ಕಾಸರಗೋಡು ನಗರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಗೌರವಿಸಿದರು. ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಕರುಣಾಕರ ಗುರುಸ್ವಾಮಿ, ಕಾರ್ಳೆ ಗುತ್ಯಮ್ಮ ಭಗವತೀ ದೈವಸ್ಥಾನದ ಕಾರ್ಯದರ್ಶಿ ಉಮೇಶ್ ಕಡಪ್ಪುರ ಹಾಗೂ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯ್ಕ, ಕಾರ್ಯಕರ್ತರಾದ ಪ್ರಮೋದ್ ಎಸ್.ವಿ.ಟಿ, ನಾಮದೇವ, ವಿಘ್ನೇಶ್, ಅಕ್ಷಯ್, ಅನೀಶ್, ಜಗನ್ನಾಥ ನಾಯ್ಕ, ಅರುಣಾ ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು.
ವಿ.ಎಚ್.ಪಿ. ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಸಂತ ಕೆರೆಮನೆ ವಂದಿಸಿದರು.
ಬದರಿನಾಥದಲ್ಲಿ ಇರುಮುಡಿ ಕಟ್ಟಿದರು
ಮೇ 26ರಂದು ಬದರಿನಾಥಕ್ಕೆ ರೈಲುಯಾತ್ರೆ ಹೊರಟು ಅಲ್ಲಿಂದ ಜೂನ್ 3ರಂದು ಶಬರಿಮಲೆಗೆ ಇರುಮುಡಿ ಕಟ್ಟಿ ಅಯೋಧ್ಯೆ, ಉಜ್ಜಯಿನಿ, ದ್ವಾರಕ, ಪುರಿಜಗನ್ನಾಥ್, ರಾಮೇಶ್ವರ, ಅಚ್ಚನ್ ಕೋವಿಲ್ ಸಹಿತ 11 ರಾಜ್ಯಗಳ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿ ಶಬರಿಮಲೆ ತಲುಪಿದ್ದರು. ದಿನಕ್ಕೆ 40 ಕಿ.ಮೀ.ನಂತೆ ಒಟ್ಟು 8000 ಕಿ.ಮೀ. ದೂರವನ್ನು 223 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಸಂಚರಿಸಿ ಎರುಮೇಲಿ ತಲುಪಿ ಮಕರ ಸಂಕ್ರಾಂತಿ ಸಂದರ್ಭ ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನ ಪಡೆದಿದ್ದರು.