ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ಲಡಾಯಿ ಪ್ರಕಾಶನದ ಮುಖ್ಯಸ್ಥರಾದ ಬಸವರಾಜ ಸೂಳಿಬಾವಿ ಸುದ್ದಿಗೋಷ್ಠಿ ನಡೆಸಿದರು. ಅಭಿಷೇಕ ಚಕ್ರವರ್ತಿ, ರಾಜಶೇಖರ ಯಡಹಳ್ಳಿ ಮತ್ತಿತರರಿದ್ದಾರೆ.  
ಜಿಲ್ಲೆ

ದಲಿತ ಚಳುವಳಿಯ ನೇತಾರ ಅನೀಲ ಹೊಸಮನಿಗೆ ಅಭಿನಂದನೆ, ಮೇ ಸಾಹಿತ್ಯ ಬಳಗದಿಂದ ಅದ್ದೂರಿ ಕಾರ್ಯಕ್ರಮ, ಎಲ್ಲಿ? ಯಾವಾಗ ಗೊತ್ತಾ?

ವಿಜಯಪುರ: ದಲಿತ ಚಳುವಳಿಯ ನೇತಾರ, ಸಾಹಿತಿ, ಹಿರಿಯ ಪತ್ರಕರ್ತ ಅನೀಲ ಹೊಸಮನಿ ಅವರಿಗೆ ಜು. 13 ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಇದೇ ವೇಳೆ ಸಮಾನ ಮನಸ್ಕರೆಲ್ಲ ಸೇರಿ ಸುಮಾರು 18 ಲಕ್ಷ ರೂಪಾಯಿ ವೆಚ್ಚದ ಸಂವಿಧಾನ ಮನೆ ಹಾಗೂ ಅಂಬೇಡ್ಕರ್ ಪ್ರೆಸ್ ನಿರ್ಮಾಣಕ್ಕೆ ಕಾಣಿಕೆ ನೀಡಲು ತೀರ್ಮಾನಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥರಾದ ಬಸವರಾಜ ಸೂಳಿಬಾವಿ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 10.30ರಿಂದ ಸಂಜೆ 7.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ನಾಡಿನ ಖ್ಯಾತ ಚಿಂತಕರು, ಸಾಹಿತಿಗಳು, ಹೋರಾಟಗಾರರು ಪಾಲ್ಗೊಳ್ಳುತ್ತಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸವಿತಾ ಅಂಬೇಡ್ಕರ್ ಅವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಮೆ ಅನೀಲ ಹೊಸಮನಿ ಅವರಿಗೆ ಸಲ್ಲಬೇಕು. ಅನುವಾದ ವಿಭಾಗದಲ್ಲಿ ಈ ಹೊತ್ತಿಗೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತು. ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅನೀಲ ಅವರ ತ್ಯಾಗ, ಪರಿಶ್ರಮ ಶ್ಲಾಘನೀಯ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶಗಳನ್ನು ಇರಿಸಿಕೊಂಡು ಅವರು ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಸಾಗಿರುವ ಅನೀಲ ಹೊಸಮನಿ ಅವರ ಕಾರ್ಯ ಸ್ಮರಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಂಬಯಿಯ ವಿಜಯ ಸುರ್ವಾಡೆ ಉದ್ಘಾಟನೆ ನೆರವೇರಿಸಲಿದ್ದು, ಬಿ. ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡುವರು. ಬೆಂಗಳೂರಿನ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಡಾ.ಅಂಬೇಡ್ಕರ್ ಸಹವಾಸದಲ್ಲಿ ಎಂಬ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆಗೊಳಿಸುವರು. ಮಾಜಿ ಶಾಸಕ ರಾಜು ಆಲಗೂರ, ಡಾ.ಆರ್. ಸುನಂದಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ರಾಜಶೇಖರ ಯಡಹಳ್ಳಿ ಅಧ್ಯಕ್ಷತೆ ವಹಿಸುವರು. ಬಳಿಕ ಅನೀಲ ಹೊಸಮನಿ ಅವರ ಸಾಹಿತ್ಯ ಕುರಿತು ನಡೆಯುವ ಗೋಷ್ಠಿಯನ್ನು ಡಾ.ಸುಜಾತ ಚಲಾವಾದಿ ನಿರ್ವಹಿಸುವರು. ಭಾರತಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು ಗಣ್ಯರು ಪಾಲ್ಗೊಳ್ಳುವರು. ವಿಜಯಪುರ ಜಿಲ್ಲೆಯ ದಲಿತ ಚಳುವಳಿ ಮತ್ತು ಅನೀಲ ಹೊಸಮನಿ ಎಂಬ ಎರಡನೇ ಗೋಷ್ಠಿಯನ್ನು ಅಭಿಷೇಕ ಚಕ್ರವರ್ತಿ ಹಾಗೂ ಅನೀಲ ಹೊಸಮನಿ ಮತ್ತು ಜನಪರ ಚಳುವಳಿಗಳ ಒಡನಾಟ ಎಂಬ ವಿಷಯದ ಕುರಿತು ಹಣಮಂತ ಚಿಂಚೋಳಿ, ಅನೀಲ ಹೊಸಮನಿ: ಬದುಕು -ಬರಹ ಕುರಿತು ಡಾ.ಓಂಕಾರ ಕಾಕಡೆ ಉಪನ್ಯಾಸ ನೀಡಲಿದ್ದು, ಬೆಂಗಳೂರಿನ ಮಾವಳ್ಳಿ ಶಂಕರ ಅಧ್ಯಕ್ಷತೆ ವಹಿಸುವರು. ಸಂಜೆ ಅನೀಲ ಹೊಸಮನಿ ಅವರೊಂದಿಗೆ ಸಂವಾದ ನಡೆಯಲಿದೆ ಎಂದು ಸೂಳಿಬಾವಿ ತಿಳಿಸಿದರು.

ಸಂಜೆ 5.30ಕ್ಕೆ ಒಡನಾಡಿಗಳು ಮಾತನಾಡಲಾಗಿದ್ದು, ಸನತಕುಮಾರ ಬೆಳಗಲಿ ಅಧ್ಯಕ್ಷತೆಯಲ್ಲಿ ಬಸವರಾಜ ಹೂಗಾರ ಅಭಿನಂದನಾ ನುಡಿಗಳನ್ನಾಡುವರು. ಗಣ್ಯಾತಿಗಣ್ಯರು ಪಾಲ್ಗೊಳ್ಳುವರು ಎಂದರು ತಿಳಿಸಿದರು.

ಅಭಿಷೇಕ ಚಕ್ರವರ್ತಿ ಮಾತನಾಡಿ, ಬುದ್ಧ ಬಸವ ಅಂಬೇಡ್ಕರ್ ವಿಚಾರಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಅನೀಲ ಹೊಸಮನಿ ಅವರಂಥ ಹೋರಾಟಗಾರರನ್ನು ಸ್ಮರಿಸುವುದು ಎಲ್ಲರ ಜವಾಬ್ದಾರಿ ಎಂದರು. ರಾಜಶೇಖರ ಯಡಹಳ್ಳಿ ಮಾತನಾಡಿದರು.

ಮುಖಂಡರಾದ ಪ್ರಭುಗೌಡ ಪಾಟೀಲ, ಶ್ರೀನಾಥ ಪೂಜಾರಿ, ಚನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು ಮತ್ತಿತರರಿದ್ದರು.