ಜಿಲ್ಲೆ

ಸೇವೆ, ಶಕ್ತಿಯಲ್ಲಿ ಆಂಜನೇಯನ ರೂಪ ಅಶ್ವಿನ್​

ಪ್ರಶಾಂತ ಜಿ. ಭಾಗ್ವತ

ಅಗ್ನಿಶಾಮಕ ಅಧಿಕಾರಿ ವಿನಾಯಕ ಸಂತಸ | ಸಾಧಕ ಸಿಬ್ಬಂದಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಮನೋಬಲ ಹಾಗೂ ದೈಹಿಕ ಶಕ್ತಿ ಉತ್ತಮವಾಗಿದ್ದರೆ ಮಾತ್ರ ಇನ್ನೊಬ್ಬರ ಜೀವ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಸೇವೆ ಹಾಗೂ ಶಕ್ತಿಯಲ್ಲಿ ಆಂಜನೇಯನ ರೂಪವೇ ಆಗಿರುವ ಅಶ್ವಿನ್​ ಸನಿಲ್​ ಎಲ್ಲ ಸಿಬ್ಬಂದಿಗೆ ಮಾದರಿ ಆಗಿದ್ದಾರೆ ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್​ ಸಂತಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಡೆನ್ಮಾರ್ಕ್​ನಲ್ಲಿ ನಡೆದ ವರ್ಲ್ಡ್​ ಫೈರ್ ಫೈರ್ಟಸ್​ ಗೇಮ್ಸ್​ನಲ್ಲಿ ಭಾರತದ ಪರವಾಗಿ ಸ್ಪರ್ಧಿಸಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗಳಿಸಿದ ಇಲಾಖೆಯ ಪ್ರಮುಖ ಅಗ್ನಿಶಾಮಕ ಅಶ್ವಿನ್​ ಸನಿಲ್​ ಅವರನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿ ಪರವಾಗಿ ಶನಿವಾರ ಸನ್ಮಾನಿಸಿ ಮಾತನಾಡಿದರು.

ರಾಜ್ಯದ ಹೆಮ್ಮೆ

ಕ್ರೀಡಾ ವಿಭಾಗದಲ್ಲಿ ಸದಾ ಸಾಧನೆ ಮಾಡುತ್ತಿರುವ ಅಶ್ವಿನ್​ ಸನಿಲ್​, ಇಲಾಖೆಗಷ್ಟೇ ಅಲ್ಲದೆ ರಾಜ್ಯದ ಹೆಮ್ಮೆಯಾಗಿದ್ದಾರೆ. ಅವರ ಸಾಧನೆ ಒಲಿಂಪಿಕ್​ ಕ್ರೀಡಾಕೂಟಕ್ಕಿಂತಲೂ ದೊಡ್ಡಮಟ್ಟದ್ದಾಗಿದೆ. ಇಂತಹ ಸಿಬ್ಬಂದಿ ನಮ್ಮೊಡನೆ ಕೆಲಸ ಮಾಡುತ್ತಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಅವರು ಕ್ರೀಡೆಯಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಉಡುಪಿ ಸರ್ಕಾರಿ ವ್ಯಾಯಾಮ ಶಾಲೆಯ ದೈಹಿಕ ಶಿಕ್ಷಕ ಉಮೇಶ್​ ಮಟ್ಟು, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ, ಜ್ಯೇಷ್ಠಾ ಕನ್​ಸ್ಟ್ರಕ್ಷನ್​ನ ಮುಖ್ಯಸ್ಥ ಯೋಗೇಶ್​, ಹಿರಿಯ ಪ್ರಮುಖ ಅಗ್ನಿಶಾಮಕ ಕೇಶವ್​, ಅಗ್ನಿಶಾಮಕ ಚಾಲಕ ಅಲ್ವಿನ್​ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಅಗ್ನಿಶಾಮಕ ಪ್ರಮುಖ ರಾಘವೇಂದ್ರ ಆಚಾರಿ ಕಾರ್ಯಕ್ರಮ ನಿರೂಪಿಸಿದರು.

ನನ್ನ ಕ್ರೀಡಾ ಸಾಧನೆಯ ಹಿಂದೆ 15 ವರ್ಷದ ಕಠಿಣ ಪರಿಶ್ರಮ ಇದೆ. ಇಲಾಖೆಯಲ್ಲಿ ನನ್ನಷ್ಟು ಹೆಚ್ಚು ಸನ್ಮಾನ ಸ್ವೀಕರಿಸಿದವರು ಬೇರೆ ಯಾರೂ ಇಲ್ಲ. ಇದಕ್ಕೆ ಉಡುಪಿಯ ಅಗ್ನಿಶಾಮಕ ಠಾಣೆಯ ಎಲ್ಲ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಹಕಾರವೇ ಕಾರಣವಾಗಿದೆ. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. | ಅಶ್ವಿನ್​ ಸನಿಲ್​. ಚಿನ್ನದ ಪದಕ ಗಳಿಸಿದ ಸಾಧಕ ಸಿಬ್ಬಂದಿ.