ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಪಂನ ಲ್ಲಿ ವಿಶೇಷ ಒಲಿಂಪಿಕ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಎಚ್.ಎನ್.ಸವಿತಾ ಅವರನ್ನು ಗ್ರಾಪಂ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಕುಮಾರ್, ಚಲುವಪ್ಪ, ಮಹಾದೇವಯ್ಯ, ನಾಗರಾಜು, ನಾಗೇಂದ್ರ ಇತರರು ಇದ್ದರು. 
ಜಿಲ್ಲೆ

ಬಾಸ್ಕೆಟ್‌ಬಾಲ್ ಆಟಗಾರ್ತಿ ಎಚ್.ಎನ್.ಸವಿತಾಗೆ ಅಭಿನಂದನೆ

ಸರಗೂರು: ರಾಷ್ಟ್ರಮಟ್ಟದ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಸರಗೂರು ತಾಲೂಕಿನ ಹಲಸೂರು ಗ್ರಾಮದ ಎಚ್.ಎನ್.ಸವಿತಾ ತಾಲೂಕಿನ ಹೆಮ್ಮೆ ಎಂದು ಗ್ರಾಪಂ ಅಧ್ಯಕ್ಷ ಹಲಸೂರು ಟಿ.ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ಕೊತ್ತೇಗಾಲ ಗ್ರಾಪಂ ವ್ಯಾಪ್ತಿಯ ಹಲಸೂರು ಗ್ರಾಮದ ಲಿಂಗಪ್ಪನಾಯಕ ಮಗಳಾದ ಎಚ್.ಎನ್.ಸವಿತಾ ಕರ್ನಾಟಕ ರಾಜ್ಯ ವಿಶೇಷ ಒಲಿಂಪಿಕ್ಸ್‌ನ ಬಾಸ್ಕೆಟ್‌ಬಾಲ್ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಇದೀಗ ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಪಂ ಆಡಳಿತ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಚ್.ಎನ್. ಸವಿತಾ ಹಲಸೂರು ಗ್ರಾಮದ ನಿಂಗಪ್ಪನಾಯಕ ಮತ್ತು ರಾಧಾ ದಂಪತಿಯ ಪುತ್ರಿಯಾಗಿದ್ದು, ಬಡತನದಲ್ಲಿ ಬೆಳೆದು ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯಕ್ಕೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಪಾಲಕರು, ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಯುವತಿ ಈ ಸಾಧನೆ ಮಾಡಿದ್ದು, ಇತರರಿಗೆ ಮಾದರಿಯಾಗಿದ್ದಾಳೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಶೋಭಾ ಸುಂದರ್, ಮಾಜಿ ಅಧ್ಯಕ್ಷ ಚಲುವಪ್ಪ, ಸದಸ್ಯರಾದ ಮಹೇಶ್, ಮಹಾದೇವಯ್ಯ, ಗೌರಮ್ಮ, ನಿರ್ಮಲಾ ಬಸವರಾಜು, ಕೆಂಪಲಾಮ್ಮ, ಡೇರಿ ಅಧ್ಯಕ್ಷ ಮಂಜುನಾಥ, ಪುಟ್ಟೇಗೌಡ, ಸುಂದರ್, ಶಂಕರಪ್ಪ, ಸಿ.ರವಿ, ಗಣೇಶ್, ಚಾಮನಾಯಕ, ಪಿಡಿಒ ನಾಗೇಂದ್ರ, ನಾಗರಾಜು, ಶಂಭುನಾಯಕ ಇತರರು ಹಾಜರಿದ್ದರು.