ಜಿಲ್ಲೆ

ವೈಜ್ಞಾನಿಕ ಲೋಕಕ್ಕೆ ಆದರ್ಶರಾದ ಸುನೀತಾ, ವಿಲ್ಮೋರ್​...

ಹಿರಿಯ ಭೌತಶಾಸ್ತ್ರಜ್ಞ ಪ್ರೊ. ಡಾ. ಎ.ಪಿ. ಭಟ್​ ಶ್ಲಾಘನೆ

ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಆತಂಕಕಾರಿ ರೀತಿಯಲ್ಲಿ 286 ದಿನ ಆಕಾಶವಾಸದಲ್ಲಿದ್ದ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್​, ಬುಚ್​ ವಿಲ್ಮೋರ್​ ಭೂಮಿಗೆ ಆಗಮಿಸಿದ್ದು, ಪ್ರಪಂಚದಾದ್ಯಂತ ಜನ ಸಂಭ್ರಮಿಸುತ್ತಿದ್ದಾರೆ. ಜೀರೋ ಗ್ರ್ಯಾವಿಟಿಯಲ್ಲಿ ಬದುಕಿ ಬಂದಿರುವುದು ಸಾಮಾನ್ಯ ಬೆಳವಣಿಗೆಯಲ್ಲ. ಅವರಿಬ್ಬರೂ ವೈಜ್ಞಾನಿಕ ಲೋಕಕ್ಕೆ ಹಾಗೂ ಅಧ್ಯಯನಕ್ಕೆ ಹೊಸ ಆದರ್ಶರಾಗಿದ್ದಾರೆ ಎಂದು ಹಿರಿಯ ಭೌತಶಾಸ್ತ್ರಜ್ಞ ಪ್ರೊ. ಡಾ. ಎ.ಪಿ. ಭಟ್​ ಶ್ಲಾಘಿಸಿದರು.

ಬಾಹ್ಯಾಕಾಶದಿಂದ ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿ ಮರಳಿದ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್​ ವತಿಯಿಂದ ಉಡುಪಿಯ ನೇತ್ರ ಜ್ಯೋತಿ ಕಾಲೇಜ್​ ಆಫ್​ ಫಿಸಿಯೊಥೆರಪಿಯಲ್ಲಿ ಮಾ.20ರಂದು ಸಂಜೆ ಆಯೋಜಿಸಿದ್ದ ಸಂಭ್ರಮಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮದಿಂದ ಜ್ಞಾನ ವೃದ್ಧಿ

ಅಮೆರಿಕದ ನಾಸಾದಿಂದ ತೆರಳಿದ್ದ ಇಬ್ಬರು ಋಷಿಗಳು ಮತ್ತೆ ಭೂಮಿಗೆ ಬಂದಿದ್ದಾರೆ. ಮಾನಸಿಕ ದೈಹಿಕ ಮತ್ತು ಭೌತಿಕ ತಪಸ್ಸಿನಿಂದ ಅವರಿಗೆ ಈ ಸಾಧನೆ ಸಾಧ್ಯವಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಎರಡು ಜೀವಗಳನ್ನು ಉಳಿಸಿದ ರೀತಿ ಪ್ರಪಂಚದಲ್ಲಿಯೇ ದೊಡ್ಡ ಮಾನವೀಯತೆಯಾಗಿ ಉಳಿದಿದೆ, ಮೆರೆದಿದೆ. ಸುನೀತಾ ಅವರೇ ಹೇಳಿದಂತೆ ಭಗವದ್ಗೀತೆ, ಉಪನಿಷತ್​ ಹಾಗೂ ಗಣೇಶನ ಆರಾಧನೆಯಿಂದ ಸಮಗ್ರ ಜ್ಞಾನ ವೃದ್ಧಿಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ನಮಗೆ ಕಲ್ಪನಾ ಚಾವ್ಲಾ ನೆನಪಾಗುತ್ತಾರೆ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಸಹ ಆತಂಕ ಇದ್ದೇ ಇರುತ್ತದೆ ಎಂದರು.

ಕಾಲೇಜಿನ ಮುಖ್ಯಸ್ಥ ಡಾ. ಕೃಷ್ಣಪ್ರಸಾದ, ಧಾರ್ಮಿಕ ಮುಖಂಡ ಕೃಷ್ಣ್ಣಮೂರ್ತಿ ಆಚಾರ್ಯ, ಡಾ. ಗೌರಿ ಪ್ರಭು, ಸಚಿನ ಶೇಟ್​, ರಶ್ಮಿ ಕೃಷ್ಣಪ್ರಸಾದ, ತಾರಾಶ್ರೀಧರ, ದಯಾನಂದ ಇತರರಿದ್ದರು.

ಶುಭ ಕೋರಿದ ವಿದ್ಯಾರ್ಥಿನಿಯರು

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್​ನ ಸಂಚಾಲಕ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜಿನ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಗಗನಯಾತ್ರಿಗಳ ಸಾಧನೆ ಪ್ರೋತ್ಸಾಹಿಸಿ ಸಂಭ್ರಮಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ಸುನೀತಾ ವಿಲಿಯಮ್ಸ್​ ಅವರ ಭಾವಚಿತ್ರ ಹಿಡಿದು ಶುಭ ಕೋರಿದರು. ಗಗನಯಾತ್ರೆಯ ಸಾಹಸ, ತಾಂತ್ರಿಕ ಸಮಸ್ಯೆ, ವಿಜ್ಞಾನಿಗಳಿಗಾದ ತೊಂದರೆ ಮತ್ತು ಅಮೆರಿಕದ ನಾಸಾ ಸಂಸ್ಥೆ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರತಂದ ರೀತಿಯ ಬಗ್ಗೆ ಪ್ರೊ. ಎ.ಪಿ. ಭಟ್​ ಸಮಗ್ರ ಮಾಹಿತಿ ನೀಡಿದರು.