ಜಿಲ್ಲೆ

ಕೆ.ಜಿ.ನಿಧಿಗೆ ಶಾಸಕರಿಂದ ಅಭಿನಂದನೆ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 84ನೇ ರ‌್ಯಾಂಕ್ ಹಾಗೂ ಕರ್ನಾಟಕ ರಾಜ್ಯದಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಕೊಡಗು ಜಿಲ್ಲೆಗೆ ಕೀರ್ತಿ ತಂದಿರುವ ಸೋಮವಾರಪೇಟೆಯ ಚೌಡ್ಲು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕೆ.ಜಿ.ನಿಧಿ ಅವರನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮನೆಗೆ ತೆರಳಿ ಅಭಿನಂದಿಸಿ ಸನ್ಮಾನಿಸಿದರು.

ನಂತರ ಮಾತನಾಡಿದ ಶಾಸಕರು ನಿಧಿಯಂತಹ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆ ಇಡೀ ಜಿಲ್ಲೆಗೆ ಹೆಮ್ಮೆ ತಂದಿದೆ. ಇದು ಹಲವು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಕೊಡಗಿನಲ್ಲಿ ಬಹುತೇಕ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಹೆಚ್ಚಿನ ಆಸಕ್ತಿಯಿಟ್ಟು ಕಲಿಕೆ ಮುಂದುವರಿಸಿದರೆ, ಹೆಚ್ಚಿನ ರ‌್ಯಾಂಕ್‌ಗಳನ್ನು ಪಡೆಯಬಹುದು ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬುದು ಶಿಕ್ಷಣ ಇಲಾಖೆಯ ಗುರಿಯಾಗಿದೆ. ವಿದ್ಯಾರ್ಥಿಗಳು ಇಂದಿನಿಂದಲೇ ಕಲಿಕೆ ಪ್ರಾರಂಭಿಸಿಬೇಕು. ಶಾಲಾ ಕಾಲೇಜಿನಲ್ಲಿ ಪಾಠ ಮಾಡಿದ ವಿಷಯವನ್ನು ಮನೆಯಲ್ಲಿ ಅಂದೇ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಿಧಿಯ ಪಾಲಕರಾದ ಕೆ.ಎಚ್.ಗಣಪತಿ ಮತ್ತು ಗುಣವತಿ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಎಸ್.ಐ. ಚೇತನ್, ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಡಿ.ಯು.ಕಿರಣ್ ಇತರರು ಇದ್ದರು.