ಜಿಲ್ಲೆ

ಸಮಾಜದ ಒಳಿತಿಗೆ ಹೆಚ್ಚು ಒತ್ತು ಕೊಡಲಿ: ಶಾಸಕ ರವಿಕುಮಾರ್ ಗಣಿಗ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಪತ್ರಿಕೋದ್ಯಮ ದೇವಸ್ಥಾನ ಇದ್ದಂತೆ. ಪತ್ರಕರ್ತರ ಬರಹ ರಾಜ್ಯವನ್ನು ಅಭಿವೃದ್ಧಿ ಕೊಂಡೊಯ್ಯುವಂತಿರಬೇಕು. ಬರೆಯುವುದನ್ನು ಜನ ನಂಬುತ್ತಾರೆ. ಆದ್ದರಿಂದ ಸಮಾಜದ ಒಳಿತಿಗಾಗಿ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಅಭಿನಂದನೆ ಮತ್ತು ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಪತ್ರಕರ್ತರಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಸಿಗುತ್ತಿವೆ. ಇದರಿಂದ ಪತ್ರಕರ್ತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿದೆ. ಸಂಘದ ಅಭಿವೃದ್ಧಿಗೆ ಶಾಸಕರ ಅನುದಾನ ಬಿಡುಗಡೆ ಮಾಡಿಕೊಡಲಾಗುವುದು. ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ನಡೆಯುತ್ತಿದೆ. ವೈಯಕ್ತಿಕವಾಗಿ ಯಾರ ವಿಚಾರವನ್ನು ತೆಗೆದುಕೊಳ್ಳಬಾರದು. ಅದು ಬೇರೆ ರೀತಿಯೇ ಆಗಿಬಿಡುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪತ್ರಕರ್ತರು ವಿಶೇಷವಾದ ಶಕ್ತಿ, ಆಸಕ್ತಿ ಹೊಂದಿರುತ್ತಾರೆ. ನೈತಿಕತೆಯಿಂದ ಸಮಾಜದಲ್ಲಿ ನಿಂತು ಆಗು-ಹೋಗುಗಳನ್ನು ಅತ್ಯಂತ ಕಠೋರವಾಗಿ ಬರೆಯುವಂಥ ಶಕ್ತಿ ಇರಬೇಕು. ಯಾವುದು ತಪ್ಪು, ಸರಿ ಎಂಬುದನ್ನು ತಿಳಿಸಬೇಕು. ಎಲ್ಲವನ್ನು ನೋಡಿಕೊಂಡು ಕಣ್ಮುಚ್ಚಿ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.

ಆತ್ಮಾವಲೋಕನ, ವಿಶ್ಲೇಷಣೆ ಮಾಡಬೇಕು. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಪತ್ರಿಕೋದ್ಯಮಕ್ಕೆ ಎಡರು-ತೊಡರು ಉಂಟಾಗಿದೆ. ಪತ್ರಿಕೆಗಳ ವಿಷಯಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದಾರೆ. ಆರೋಗ್ಯಕರವಾದ ಪೈಪೋಟಿ ಇರಬೇಕು. ಅನಾರೋಗ್ಯಕರವಾದರೆ ಯಶಸ್ಸು ಸಿಗುವುದಿಲ್ಲ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಹಾಗೂ ನೊಂದವರ ಪರ ನ್ಯಾಯ ಒದಗಿಸುವ ಶಕ್ತಿ ನಿಮ್ಮಲ್ಲಿದೆ. ಅದು ಮುಂದುರೆಯಬೇಕು ಎಂದು ತಿಳಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿದರು. ರಾಜ್ಯಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕಮಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ, ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಖಜಾಂಚಿ ನಂಜುಂಡಸ್ವಾಮಿ ಇತರರಿದ್ದರು.

ಇದೇ ವೇಳೆ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಮತ್ತು ಮಾಧ್ಯಮ ಮಾನ್ಯತಾ ಸಮಿತಿಯ ಸದಸ್ಯ ಡಿ.ಶಶಿಕುಮಾರ್ ಅವರನ್ನು ಅಭಿನಂದಿಸಲಾಯಿತು.