ಕುಶಾಲನಗರ:
ಪಕ್ಷಕ್ಕಾಗಿ ದುಡಿದ ಅಲ್ಪಸಂಖ್ಯಾತರು ತಮಗೆ ಸಿಗಬೇಕಾದ ಸ್ಥಾನಮಾನಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಎಲ್ಲ ರೀತಿಯಿಂದಲೂ ಅಲ್ಪಸಂಖ್ಯಾತರ ಹಿತ ಕಾಯುತ್ತದೆ. ಪಕ್ಷದಲ್ಲಿ ಅಲ್ಪ ಸ್ವಲ್ಪ ಅಭಿಪ್ರಾಯ ಭೇದಗಳಿದ್ದರೂ ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ಯಾವುದೇ ರೀತಿಯಲ್ಲಿ ವಿಫಲವಾಗಿಲ್ಲ.. ಅವರಿಗೆ ಎಲ್ಲ ರೀತಿಯ ಸ್ಥಾನಮಾನಗಳು ಸಿಗುತ್ತವೆ ಎಂದರು.
ಭರವಸೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಇಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ತಮ್ಮ ಪಕ್ಷದ ಪರವಾಗಿದ್ದಾರೆ ಎಂಬ ಭ್ರಮೆಯಲ್ಲಿ ನಾಯಕರು ಇರಬಾರದು. ಅವರಿಗೆ ಪರ್ಯಾಯ ವ್ಯವಸ್ಥೆ ಇದ್ದರೂ ಕಾಂಗ್ರೆಸ್ ಬಗ್ಗೆ ನಂಬಿಕೆ ಇರಿಸಿಕೊಂಡು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಾಯಕರು ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಅಲ್ಪಸಂಖ್ಯಾತರಿಗಾಗಿ ಈ ಹಿಂದೆ ನಾಲ್ಕು ಮನೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಎರಡು ಮನೆಗಳನ್ನು ಮಾತ್ರ ಪ್ರತಿ ಗ್ರಾಮ ಪಂಚಾಯಿತಿಗೆ ಕೊಡಲಾಗುತ್ತಿದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ, ಅಲ್ಪಸಂಖ್ಯಾತರು ಇಲ್ಲ. ಅಂತಹ ಕಡೆ ಇರುವ ಮನೆಗಳನ್ನು ಬೇರೆ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿದರು. ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಕ್ಷದ ಮುಖಂಡ ಮಂಜುನಾಥ್ ಗುಂಡೂರಾವ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಟಿ.ಪಿ. ಹಮೀದ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಹನೀಫ್. ಕಾಂಗ್ರೆಸ್ ಮುಖಂಡರಾದ ಫಿಲೋಮಿನಾ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮತ್ತಿತರರು ಇದ್ದರು.
ಈ ಸಂದರ್ಭ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಕಾರ್ಯಕರ್ತರು, ಅಲ್ಪಸಂಖ್ಯಾತರು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಸಂಪೂರ್ಣ ಪರಿವರ್ತನೆಯಾಗಿದ್ದಾರೆ. ಯಾವುದೇ ರೀತಿಯ ಷರತ್ತುಗಳಿಲ್ಲದೆ ಸದಾ ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿ ನಿಂತಿರುವ ಇವರನ್ನು ಪಕ್ಷ ಯಾವುದೇ ಸ್ಥಾನಮಾನಗಳನ್ನು ಸರಿಯಾಗಿ ಒದಗಿಸದೆ ನಿರಾಸೆ ಪಡಿಸಿದೆ. ಈ ಬಗ್ಗೆ ಶಾಸಕರು, ಪಕ್ಷದ ಮುಖಂಡರು ಹೆಚ್ಚಿನ ಜವಾಬ್ದಾರಿಯಿಂದ ಅವರ ಸ್ಥಾನಮಾನಗಳ ಬಗ್ಗೆ ಗಮನಹರಿಸಬೇಕು ಎಂದು ತಮ್ಮ ಅಹವಾಲು ತೋಡಿಕೊಂಡರು.