ಜಿಲ್ಲೆ

ಜನ ಬದಲಾವಣೆ ಬಯಸಿದ್ದಾರೆ: ಮಧು ಬಂಗಾರಪ್ಪ

reportermys

ಮಡಿಕೇರಿ:
ರಾಜ್ಯದ ಜನ ಬದಲಾವಣೆ ಬಯಸಿದ್ದು, ಆ ಬದಲಾವಣೆಯನ್ನು ಕಾಂಗ್ರೆಸ್‌ನಲ್ಲಿ ಕಾಣುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಸಿದ್ದಾಪುರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಗ್ಯಾರಂಟಿ ಕೊಟ್ಟರೆ ಜನ ಅದನ್ನು ನಂಬುತ್ತಾರೆ. ಆದರೆ ಬಿಜೆಪಿ ಭರವಸೆ ಕೊಟ್ಟರೆ ನಾಮ ಹಾಕುತ್ತದೆ ಎನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ರಾಜ್ಯದಲ್ಲಿ ರೈತರಿಗೆ ಭೂಮಿ ಕೊಟ್ಟವರು ದೇವರಾಜ್ ಅರಸು, ಕೃಷಿಗೆ ಉಚಿತ ವಿದ್ಯುತ್ ಕೊಟ್ಟವರು ಮಾಜಿ ಸಿಎಂ ಎಸ್ ಬಂಗಾರಪ್ಪ. ಈ ವೇಳೆ ಕೊಡಗಿನ ಕೃಷಿಕರಿಗೂ ಉಚಿತ ವಿದ್ಯುತ್ ಸಿಗುತ್ತಿತ್ತು. ಆದರೆ ಕಾಫಿ ವಾಣಿಜ್ಯ ಬೆಳೆ ಎನ್ನುವ ಕಾರಣಕ್ಕೆ ಬಿಜೆಪಿ ಈ ಸವಲತ್ತನ್ನು ಕೊಡಗಿನಲ್ಲಿ ವಾಪಸ್ ತೆಗೆದುಕೊಂಡಿದೆ. ನಂತರ ವಾಪಸ್ ಕೊಡಿಸಲು ಇಲ್ಲಿನ ಶಾಸಕರಿಗೆ ಇನ್ನೂ ಆಗಿಲ್ಲ.

ರಾಜ್ಯದಲ್ಲಿ ಶೇ. ೫೦ಕ್ಕೂ ಹೆಚ್ಚು ಹಿಂದುಳಿದ ವರ್ಗದವರು ಇದ್ದಾರೆ. ಇವರನ್ನೆಲ್ಲಾ ಮತ್ತೆ ಕಾಂಗ್ರೆಸ್‌ಗೆ ತರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದ ಅವರು ಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಾರ್ಟಿ ಎನ್ನುವಂತಾಗಿದೆ. ಆ ಪಕ್ಷ ವ್ಯವಹಾರಕ್ಕೆ ಬಂದಿದೆ. ಇದನ್ನು ತಪ್ಪಿಸಬೇಕು ಎಂದರು.

ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಮಾತನಾಡಿ ಅಭಿವೃದ್ಧಿಯಲ್ಲಿ ಕೊಡಗು ರಾಜ್ಯದಲ್ಲೇ ಅತ್ಯಂತ ಹಿಂದುಳಿದಿದೆ. ನಾಗರಿಕರು ನಡೆಯಲೂ ಆಗದ ರಸ್ತೆಗಳು ಕೊಡಗಿನಲ್ಲಿದೆ. ಶೇ. ೪೦ ಕಮಿಷನ್‌ಗೆ ರಾಜ್ಯದ ಬಜೆಟ್ ಹಣ ಹೋಗುತ್ತಿದೆ. ಈ ಹಿಂದಿನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿದೆ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರ ಇಲ್ಲ. ಬಿಜೆಪಿ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಜಾರಿಗೆ ತರಲು ಆಗದ ಮೀಸಲಾತಿ ವಿಷಯ ಮಾತನಾಡುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಅಧಿಕಾರ ಮಾಡಿದ್ದಾರೆ. ಹಾಗಾಗಿ ಜನ ಬದಲಾವಣೆ ಬಯಸಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ಆಗದಿದ್ದರೆ ಇದು ಭಾರತದಲ್ಲೇ ಪ್ರಜಾಪ್ರಭುತ್ವದ ಕಗ್ಗೊಲೆ ಆಗಲಿದೆ ಎಂದರಲ್ಲದೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಯೋಜನೆಗೆ ಹಣ ಎಲ್ಲಿಂದ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಬೊಕ್ಕಸದಿಂದ ಬಿಜೆಪಿ ಲೂಟಿ ಹೊಡೆಯುತ್ತಿದ್ದ ಹಣವನ್ನು ಈ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಹಿಂದುಳಿದ ವರ್ಗಗಳ ೩೨ ಸಮುದಾಯ ಕೊಡಗಿನಲ್ಲಿ ಇದೆ. ೧೮ ಕೊಡವ ಭಾಷಿಕ ಸಮುದಾಯಗಳಿವೆ. ಇವರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಲಿದೆ. ಕೊಡಗಿಗೆ ನಾರಾಯಣ ಗುರು ಸಮುದಾಯ ಭವನ ಬೇಕಿದ್ದು ಇದಕ್ಕೆ ಪ್ರಣಾಳಿಕೆಯಲ್ಲಿ ಮೊದಲ ಅದ್ಯತೆ ನೀಡಲಾಗುವುದು ಎಂದರು.
ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಟಿ. ಪಿ. ರಮೇಶ್ ಮಾತನಾಡಿ ಬಿಜೆಪಿ ಹೊಸ ಮೀಸಲಾತಿ ತಂದು ಗೊಂದಲ ಮೂಡಿಸಿದೆ. ಈ ಬೆನ್ನಲ್ಲೇ ಬಂಜಾರ ಜನಾಂಗ ಈಗಾಗಲೇ ಪ್ರತಿಭಟನೆ ನಡೆಸಿದೆ. ಇತರ ಸಮುದಾಯಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದೆ ಎಂದರು.


ಮಾಜಿ ಸಚಿವೆ ಸುಮಾ ವಸಂತ್, ಮಾಜಿ ಎಂಎಲ್.ಸಿ. ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಾನಂಡ ಪೃಥ್ಯು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಎನ್. ಬಾಲಕೃಷ್ಣ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ರಂಜಿ ಪೂಣಚ್ಚ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್. ಮಂಜುನಾಥ್, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪ್ರಮುಖರು ವೇದಿಕೆಯಲ್ಲಿ ಇದ್ದರು.
ಇದಕ್ಕೂ ಮೊದಲು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.