ಮಡಿಕೇರಿ:
ಏ.೫ರಂದು ಸಿದ್ದಾಪುರದಲ್ಲಿ ತಮ್ಮ ಪಕ್ಷದ ವತಿಯಿಂದ ಹಿಂದುಳಿದ ವರ್ಗದವರ ಸಮಾವೇಶ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷ ಸಂಘಟನೆಗಾಗಿ ಈಗಾಗಲೇ ಜಿಲ್ಲೆಯಲ್ಲಿ ಎಸ್‌ಟಿ ಸಮಾವೇಶ, ಮಹಿಳಾ ಸಮಾವೇಶ ನಡೆಸಲಾಗಿದೆ. ಸಿದ್ದಾಪುರದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗದವರ ಸಮಾವೇಶಕ್ಕೆ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸಿಕೊಂಡು ಸಮಾವೇಶ ನಡೆಸಲಾಗುವುದು. ಕೊಡಗಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ೩೨ ಸಮುದಾಯಗಳು ಇವೆ. ಈ ಪೈಕಿ ೧೮ ಸಮುದಾಯಗಳು ಕೊಡವ ಭಾಷಿಕ ಸಮುದಾಯವಾಗಿದೆ. ಇವರೆಲ್ಲರ ಹಿತಾಶಕ್ತಿ ಕಾಪಾಡುವ ಸಲುವಾಗಿ ಈ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಿಲ್ಲೆಯ ೧೮ ಮೂಲನಿವಾಸಿಗಳಿಗೆ ಇನ್ನೂ ಸರಿಯಾಗಿ ಮೀಸಲಾತಿ ಸಿಕ್ಕಿಲ್ಲ. ಕಾಂತರಾಜ್ ಆಯೋಗದ ವರದಿ ಜಾರಿಗೆ ಬಂದಿದ್ದರೆ ಎಲ್ಲರಿಗೂ ಅನುಕೂಲ ಆಗುತ್ತಿತ್ತು. ಸಿದ್ದಾಪುರದಲ್ಲಿ ನಡೆಯುವ ಸಮಾವೇಶದಲ್ಲಿ ಕಾಂತರಾಜ್ ಆಯೋಗದ ವರದಿ ಬಿಡುಗಡೆಗೆ ಒತ್ತಾಯ ಮಾಡಲಾಗುವುದು. ಸಣ್ಣ ಸಣ್ಣ ಜನಾಂಗಗಳಿಗೆ ಧೈರ್ಯ ತುಂಬಲು ಮೀಸಲಾತಿ ಅಗತ್ಯವಿದೆ. ಆದರೆ ಸರಕಾರ ಈಗ ತರಾತುರಿಯಲ್ಲಿ ಮೀಸಲಾತಿ ತಂದು ಗೊಂದಲ ಸೃಷ್ಟಿಸಿದೆ ಎಂದರು. ಮೀಸಲಾತಿಯಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಬೇಕು. ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗದವರಿಗೆ ಭೂಮಿ, ನಿವೇಶನ ಹಾಗೂ ರೇಷನ್ ಕಾರ್ಡ್ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಸಿಗಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪೃಥ್ಯು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕೆಪಿಸಿಸಿ ಕಾರ್ಯದರ್ಶಿ ಮುದ್ದಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.