ಜಿಲ್ಲೆ

ಬೆಂಗಳೂರು ಬಂದ್ ಬಗ್ಗೆ ಸಂಘಟನೆಗಳಲ್ಲಿ ಗೊಂದಲ?: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ

ಮಂಜುನಾಥ.ಕೆ

ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸೆ.೨೬ ರಂದು ಕರೆ ನೀಡಲಾಗಿರುವ ‘ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳಲ್ಲಿಯೇ ಗೊಂದಲ ಉಂಟಾಗಿದೆ.


ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮಂಗಳವಾರ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರೆ ಸಂಘಟನೆಗಳು ಸೆ.೨೬ ರಂದು ಬೆಂಗಳೂರು ಬಂದ್ ಕೈಬಿಟ್ಟು ಸೆ.೨೯ ರಂದು ಎಲ್ಲಾ ಸಂಘಟನೆಗಳು ಒಟ್ಟಾಗಿ ಕರ್ನಾಟಕ ಬಂದ್ ಮಾಡೋಣ ಎಂದಿವೆ.


ಸೆ.೨೬ ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಎಲ್ಲರೂ ಒಟ್ಟು ಸೇರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಎಲ್ಲಾ ಸಂಘಟನೆಗಳು ಸೇರಿಕೊಂಡು ಕರ್ನಾಟಕ ಬಂದ್ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ. ಹೀಗಾಗಿ ಬೆಂಗಳೂರು ಬಂದ್ ಹಿಂಪಡೆಯಲು ಮನವಿ ಮಾಡಿದೆ.
ಈ ಬಗ್ಗೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಸೆ.೨೬ರ ಬೆಂಗಳೂರು ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಪ್ರತ್ಯೇಕವಾಗಿ ಬೇಡ ಅಂತ ಮನವಿ ಮಾಡಲಾಗಿದೆ. ಎರಡು ಬಾರಿ ಬಂದ್ ಮಾಡುವ ಬದಲು ಒಂದೇ ಬಾರಿ ರಾಜ್ಯ ಬಂದ್ ಮಾಡೋಣ. ಈ ಬಗ್ಗೆ ವಾಟಾಳ್ ನಾಗರಾಜ್ ಸೇರಿ ಎಲ್ಲ ಸಂಘಟನೆಗಳ ಜತೆ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.


ಮತ್ತೊಂದೆಡೆ, ಅಖಂಡ ಕರ್ನಾಟಕ ಬಂದ್ ನಡೆಸಲು ಒಂದಷ್ಟು ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು, ಸೋಮವಾರದಂದು ಬಂದ್ ದಿನಾಂಕ ಘೋಷಣೆ ಮಾಡಲಿದ್ದಾರೆ. ಸೆ. ೨೯ ಅಥವಾ ೩೦ ರಂದು ಅಖಂಡ ಕರ್ನಾಟಕ ಬಂದ್ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, ೨೬ ರಂದು ಬಂದ್‌ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಅವರ ಜತೆಗೆ ಮಾತಾಡುತ್ತೇವೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡೋಣ ಅಂತ ಮನವಿ ಮಾಡುವುದಾಗಿ ಹೇಳಿದ್ದಾರೆ.

ಬಂದ್ ಬಗ್ಗೆ ನಾಳೆ ಮಹತ್ವದ ಸಭೆ
ಕರ್ನಾಟಕ ಬಂದ್‌ಗೆ ಕರೆ ನೀಡುವ ಸಂಬಂಧ ನಗರದ ಖಾಸಗಿ ಹೊಟೇಲ್ನಲ್ಲಿ ಸೋಮವಾರ ಮಹತ್ವದ ಸಭೆ ನಡೆಯಲಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಜತೆ ಚರ್ಚಿಸಿ ಕರ್ನಾಟಕ ಬಂದ್ ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಸಭೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಶಿವರಾಮೇಗೌಡ, , ವಿವಿಧ ಕನ್ನಡಪರ ಸಂಘಟನೆಗಳ ಭಾಗವಹಿಸಲಿವೆ.

೯೨ ಸಂಘಟನೆಗಳಿಂದ ಬಂದ್‌ಗೆ ಬೆಂಬಲ
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್ ಆದ್ಮಿ ಪಕ್ಷ ಸೇರಿ ೯೨ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಈ ಸಂಘಗಳಲ್ಲಿ ಬಿಬಿಎಂಪಿ ಕಾರ್ಮಿಕ ಸಂಘ, ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ವಾಹನ ಚಾಲಕರ ಮತ್ತು ಮಾಲೀಕರ ಸಂಘಗಳು ಬೆಂಬಲ ನೀಡಿರುವುದರಿಂದ ಸಾರಿಗೆ ಹಾಗೂ ಬಿಬಿಎಂಪಿಯ ಕಾರ್ಯಗಳಲ್ಲಿ ವ್ಯತ್ಯಯವಾಗಲಿದೆ. ಅದರ ಜತೆಗೆ ಖಾಸಗಿ ಶಾಲೆಗಳ ಸಂಘಟನೆಯಾದ ರುಪ್ಸಾ, ಖಾಸಗಿ ಶಾಲೆಗಳ ಪೋಷಕರ ಸಮನ್ವಯ ಸಮಿತಿ ಬೆಂಬಲ ನೀಡಿರುವುದರಿಂದ ಮಂಗಳವಾರ ಖಾಸಗಿ ಶಾಲೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಂತಾಗಲಿದೆ.


ಹಲವು ಸೇವೆಗಳಲ್ಲಿ ವ್ಯತ್ಯಯ
ಬೆಂಗಳೂರು ಬಂದ್‌ನಿಂದಾಗಿ ಮಂಗಳವಾರ ಬೆಂಗಳೂರಿನಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಬಿಎಂಟಿಸಿ ಬಸ್‌ಗಳು ಭಾಗಶಃ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಅದರ ಜತೆಗೆ ಓಲಾ-ಊಬರ್ ಆಟೋ, ಕ್ಯಾಬ್‌ಗಳು ಸಂಚರಿಸುವುದಿಲ್ಲ. ಅಲ್ಲದೆ, ಎಪಿಎಂಸಿ ನೌಕರರು ಬೆಂಬಲ ನೀಡಿರುವುದರಿಂದ ಮಾರುಕಟ್ಟೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಆಭರಣ ಮಳಿಗೆಗಳು, ಚಲನಚಿತ್ರ, ಧಾರವಾಹಿ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ಹಲವು ಸೇವೆಗಳು ವ್ಯತ್ಯಯವಾಗಲಿದೆ.

ರಾಜ್ಯ ಹಾಗೂ ಬೆಂಗಳೂರು ನಗರ ಹಿತ ದೃಷ್ಟಿಯಿಂದ ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ತಡಮಾಡಿದರೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತದೆ. ಇದರಿಂದ ಕೆಆರ್‌ಎಸ್ ಖಾಲಿಯಾಗುತ್ತದೆ. ೨೬ ಕ್ಕೆ ದೆಹಲಿಯಲ್ಲಿ ನೀರು ನಿರ್ವಾಹಣಾ ಮಂಡಳಿ ಸಭೆ ಇದೆ. ಆ ಸಭೆಗೆ ಒತ್ತಡ ತರಬೇಕು ಹಾಗೂ ರಾಜ್ಯ ಸರ್ಕಾಕ್ಕೆ ಬುದ್ದಿ ಕಲಿಸಲು ಬಂದ್ ಮಾಡಲಾಗುತ್ತಿದೆ. ಜತೆಗೆ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಲು ವಾಟಾಳ್ ನಾಗರಾಜು ಕರೆದಿರುವ ಸಭೆಗೆ ಹಾಜರಾಗುತ್ತೇನೆ.
ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ