ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಶ್ರೀ ಮಹಾದೇವ ತಾತನವರ ಜಾತ್ರಾ ಮಹೋತ್ಸವ ಅಂಗವಾಗಿ, ಜರುಗಿದ ಧಾರ್ಮಿಕ ಸಭೆಯಲ್ಲಿ ಬಾಳೇ ಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿದರು. ಹಿರೇಮಠದ ಶಾಂತಲಿಂಗ ಶಿವಾಚಾರ್ಯರು, ನೆಗಳೂರು ಗುರುಶಾಂತ ಸ್ವಾಮೀಜಿ, ಹಿರೇಮಠದ ವೀರೇಶ್ವರ ಸ್ವಾಮೀಜಿ, ಅಂಗೂರು ಹಿರೇಮಠದ ಶಿವಯೋಗಿ, ಕೂಡ್ಲಿಗಿ ಡಾ.ಪ್ರಶಾಂತ ಸ್ವಾಮೀಜಿ, ಶಾಸಕರಾದ ಕೆ.ನೇಮಿರಾಜನಾಯ್ಕ, ಕೃಷ್ಣನಾಯ್ಕ , ರೋಣ ಶಾಸಕ ಜೆ.ಎಸ್.ಪಾಟೀಲ್ ಇತರರಿದ್ದರು. 
ಜಿಲ್ಲೆ

ಜಾತಿ-ಧರ್ಮಗಳ ಮಧ್ಯೆ ಸಂಘರ್ಷ ಸಲ್ಲ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ಕೆಲವರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡೇ ಜಾತಿ, ಧರ್ಮಗಳ ಮಧ್ಯೆ ಸಂಘರ್ಷವನ್ನುಂಟುಮಾಡುವ ನಿಟ್ಟಿನಲ್ಲಿ ತೊಡಗಿದ್ದಾರೆ ಎಂದು ಬಾಳೇ ಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹಂಪಸಾಗರದ ಶ್ರೀ ಮಹಾದೇವ ತಾತನವರ ಮಠದಲ್ಲಿ ಶನಿವಾರ ಆಯೋಜಿಸಿದ್ದ ಬಾಳೇ ಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವದ ಬಳಿಕ ಜರುಗಿದ ಧರ್ಮಸಭೆ ಉದ್ದೇಶಿಸಿ ಮಾತನಾಡಿದರು.

ಜಾತಿ ಆಧಾರದ ಮೇಲೆ ಅಭಿವೃದ್ಧಿಯ ವಿಷಯವಾಗಿ ನಿಲುವು ತಾಳುವ ಕೆಲವರು ಇಂತಹ ಕೆಲಸಮಾಡುತಿದ್ದಾರೆ. ಆದರೆ, ಮಾನವ ಧರ್ಮಕ್ಕಾಗಿಯೇ ಶ್ರಮಿಸುವುದು ಎಂದರೆ ಅದು ರಂಭಾಪುರಿ ಪೀಠ. ಜಾತಿ- ಧರ್ಮಗಳ ಮಧ್ಯೆ ಸಂಘರ್ಷ ಒಳ್ಳೆಯ ಬೆಳವಣಿಗೆ ಅಲ್ಲ. ನಿಮ್ಮ ನಿಮ್ಮ ಧರ್ಮಾಚರಣೆ ಮಾಡುತ್ತ, ಸಾರ್ವತ್ರಿಕ ವಲಯದಲ್ಲಿ ಸಮಷ್ಟಿ ಪ್ರಜ್ಞೆಯನ್ನಿಟ್ಟುಕೊಂಡು ಎಲ್ಲರೂ ನಡೆಯಬೇಕು.

ಹಂಪಸಾಗರದಲ್ಲಿ ಮುಂದಿನ ದಿನಗಳಲ್ಲಿ ಇಷ್ಟಲಿಂಗಪೂಜೆಗೆ ಅವಕಾಶ ಕಲ್ಪಿಸಬೇಕು. ಹಡಗಲಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಇದ್ದಾಗ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸಾಮರಸ್ಯ ಕಾರ್ಯಕ್ರಮ ಏರ್ಪಡಿಸಬೇಕು.ದೇವರು ಎಲ್ಲ ಸಮುದಾಯದವರಿಗೂ ಒಳ್ಳೆಯದನ್ನು ಮಾಡಲಿ ಎಂದರು.

ಶಾಸಕ ಕೆ.ನೇಮಿರಾಜನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯಾದ್ಯಂತ ಸಂಚರಿಸುವ ಮೂಲಕ ಪಂಚಪೀಠಗಳ ಪೀಠಾಧೀಶರು ಒಳ್ಳೆಯದನ್ನೇ ಬಯಸುವ, ಎಲ್ಲಾ ಧರ್ಮಿಯರಲ್ಲಿ ಸಮಾನತೆ, ಸಹಬಾಳ್ವೆ, ಸಾಮರಸ್ಯಗಳನ್ನು ಮೂಡಿಸುವ ಮತ್ತು ಜನತೆಯನ್ನು ಒಗ್ಗೂಡಿಸುವ ಕೆಲಸಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಶಿಕ್ಷಕ ಚನ್ನಯ್ಯ ಅವರ ‘ರಂಭಾಪುರಿ ಜಗದ್ಗುರು’ ಕಿರು ಕೃತಿಯನ್ನು ಬಿಡುಗಡೆಮಾಡಲಾಯಿತು.

ಅಭಿನವ ರುದ್ರಮುನಿ ಸ್ವಾಮೀಜಿ ಮಾತನಾಡಿ, ರಂಭಾಪುರಿ ಪೀಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಮಹತ್ವ ತಪಸ್ವಿಗಳು ಇಂದು ಗ್ರಾಮಕ್ಕೆ ಬಂದಿದ್ದಾರೆ ಎಂದರೆ ಅದು ಈ ನೆಲದ ಪುಣ್ಯ ಎಂದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಕೃಷಿಮೇಳ, ರಥೋತ್ಸವ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.