ಮಾಂಜರಿ: ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಭಯಪಡದೆ ಆಸಕ್ತಿ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಶಸ್ಸು ಖಚಿತ ಎಂದು ಗ್ರಾಪಂ ಸದಸ್ಯ ಸುರೇಶ ಪಾಟೀಲ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಮಹತ್ವಪೂರ್ಣವಾಗಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.
ವಿವೇಕ ಕಮತೆ ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ವಿಕಾಸ ಪಾಟೀಲ, ಸಂಭಾಜಿ ಮೋರೆ, ಶಿವಾಜಿ ಕೋಳಿ ಇತರರಿದ್ದರು.
ಮುಖ್ಯ ಶಿಕ್ಷಕ ಕೆ.ಯು.ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಎಂ.ಎ.ಶಿಂಧೆ ವರದಿ ವಾಚನ ಮಾಡಿದರು. ಶಿಕ್ಷಕಿ ಪಿ.ಎಸ್.ಒಡೆಯರ ವಂದಿಸಿದರು. ಬಿ.ಎಸ್.ಜಕಾತಿ ನಿರೂಪಿಸಿದರು.