ರಾಯಚೂರು ಒಳಮೀಸಲಾತಿ ವರ್ಗೀಕರಣ ಜಾರಿ ಮಾಡದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮಾದಿಗ ದಂಡೋರ ಸಮಿತಿಯಿಂದ ಅಗಸ್ಟ್ 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘‘ಹಲೋ ಮಾದಿಗ ಚಲೋ ಬೆಂಗಳೂರು’’ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಂದು ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಡ್ ತೀರ್ಪು ನೀಡಿ ಆಗಸ್ಟ್ 1ಕ್ಕೆ ವರ್ಷವಾಗುತ್ತದೆ. ಆದರೆ ರಾಜ್ಯ ಸರ್ಕಾರ ವಿನಾಕಾರಣ ಒಳ ಮೀಸಲಾತಿ ವಿಳಂಬ ಮಾಡುತ್ತಿದೆ. ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದ ಆಯೋಗವೂ ಮಂದಗತಿಯಲ್ಲಿ ವರದಿಯನ್ನು ತಯಾರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹರಿಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಈವರೆಗೂ ಒಳಮೀಸಲಾತಿ ಜಾರಿ ಮಾಡಿಲ್ಲ. ಹೀಗಾಗಿ, ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ನಮ್ಮ ಸಂಘಟನೆಯ ಮುಖ್ಯಸ್ಥ ಮಂದಕೃಷ್ಣ ಮಾದಿಗ ಉಪಸ್ಥಿತರಿರಲಿದ್ದಾರೆ.
ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಹದೇವಪ್ಪ ಅವರನ್ನು ಭೇಟಿ ಆಗಿ ಚರ್ಚೆ ನಡೆಸಿದ್ದರು ಕೂಡ ವಿಳಂಬ ನೀತಿಯನ್ನು ಮಾಡುತಿದ್ದು, ಕಾಂಗ್ರೆಸ್ ಪ್ರಮುಖ ನಾಯಕರು , ರಾಜ್ಯಸಭೆಯ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಒಳಮೀಸಲಾತಿ ಜಾರಿಗೆ ತರಲು ಅಡ್ಡಿಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ , ರಂಜಿತ್ ದಂಡೋರಾ , ಸುರೇಶ ದುಗನೂರು, ದುಳ್ಳಯ್ಯ ಗುಂಜಹಳ್ಳಿ , ಗೋವಿಂದ ಈಟೇಕರ್ , ಭೀಮೇಶ್ ತುಂಟಾಪುರ ಇದ್ದರು.