ಜಿಲ್ಲೆ

ಫೆ.27ರಂದು ಇತಿಹಾಸ ವಿದ್ವಾಂಸರ ಸಮಾವೇಶ...

ಟ್ರಸ್ಟ್​ ಕಾರ್ಯದರ್ಶಿ ವಿಶ್ವನಾಥ್​ ಪಾದೂರು ಮಾಹಿತಿ

ಡಾ. ಗುರುರಾಜ್​ ಭಟ್​ ಸ್ಮರಣಾರ್ಥ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಡಾ.ಪಾದೂರು ಗುರುರಾಜ್​ ಭಟ್​ ಅವರ ಜನ್ಮಶತಾಬ್ದಿಯ ಸ್ಮರಣಾರ್ಥ ಡಾ.ಪಾದೂರು ಗುರುರಾಜ್​ ಭಟ್​ ಸ್ಮಾರಕ ಟ್ರಸ್ಟ್​ ವತಿಯಿಂದ ಫೆ.27ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಡುಪಿಯ ಟೌನ್​ ಹಾಲ್​ನಲ್ಲಿ ಪ್ರಸಿದ್ಧ ವಿದ್ವಾಂಸರ ಸಮಾವೇಶ ಆಯೋಜಿಸಲಾಗಿದೆ ಎಂದು ಗುರುರಾಜ್​ ಭಟ್​ ಅವರ ಪುತ್ರ, ಟ್ರಸ್ಟ್​ನ ಕಾರ್ಯದರ್ಶಿ ವಿಶ್ವನಾಥ್​ ಪಾದೂರು ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಫೆ.21ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಇತಿಹಾಸ ಮತ್ತು ವಿಶೇಷವಾಗಿ ದೇವಾಲಯಗಳ, ದೇವತಾಮೂರ್ತಿಗಳ ಕುರಿತು ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ಧರಾದವರ ಸಮಾವೇಶ ಇದಾಗಿದೆ. ಇತಿಹಾಸಕಾರರೊಂದಿಗೆ ಸಂವಾದಕ್ಕೂ ಅವಕಾಶವಿದೆ ಎಂದರು.

ತಜ್ಞರಿಂದ ಅಭಿಪ್ರಾಯ ಮಂಡನೆ

ಇತಿಹಾಸ ತಜ್ಞ ಪದ್ಮಶ್ರೀ ಕೆ.ಕೆ. ಮಹಮ್ಮದ್​ ಅವರು ಭಾರತೀಯ ಪ್ರಾಚೀನ ದೇವಾಲಯಗಳ ಪುನರ್​ ನಿಮಾರ್ಣದ ಬಗ್ಗೆ ಮಾತನಾಡಲಿದ್ದಾರೆ. ದೇವಾಲಯಗಳ ವಾಸ್ತು ವಿನ್ಯಾಸ, ರಚನೆ ಮತ್ತು ಅಲಂಕಾರಿಕ ಕೆತ್ತನೆಯ ವಿಷಯಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞ ಸುರೇಂದ್ರನಾಥ್​ ಬೊಪ್ಪರಾಜು ಅವರು ಪ್ರಾಚೀನ ಭಾರತೀಯರ ನೈಪುಣ್ಯ ಕೌಶಲ ಮತ್ತು ವಿಜ್ಞಾನ ಹಾಗೂ ಸೌಂದರ್ಯದ ಬಗ್ಗೆ ಹಾಗೂ ಇತಿಹಾಸ ತಜ್ಞ ವಿಕ್ರಂ ಸಂಪತ್​ ಅವರು ಇಂದಿನ ಭಾರತೀಯ ಇತಿಹಾಸದ ಪಠ್ಯ-ಮುಚ್ಚಿಟ್ಟ ಸಾಂಸ್ಕೃತಿಕ ಆಧ್ಯಾತ್ಮಿಕ ಆಯಾಮಗಳು ಮತ್ತು ಪೂರ್ವನಿರ್ಧಾರಿತ ಪಠ್ಯಗಳಲ್ಲಿ ಅಸತ್ಯಗಳು ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಸ್ಮರಣಾರ್ಥ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದ ನಿಮಿತ್ತ ಗುರುರಾಜ ಭಟ್​ ಶತಮಾನೋತ್ಸವ ಸ್ಮರಣಾರ್ಥ ಪುರಸ್ಕಾರವನ್ನು ಇತಿಹಾಸ ತಜ್ಞ ವಿಕ್ರಂ ಸಂಪತ್​ ಅವರಿಗೆ ಪ್ರದಾನ ಮಾಡಲಾಗುವುದು ಎಂದು ವಿಶ್ವನಾಥ್​ ಪಾದೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುರಾಜ್​ ಭಟ್​ ಅವರ ಪುತ್ರ ಪರಶುರಾಮ್​ ಭಟ್​, ರಘುಪತಿ ರಾವ್​, ವೆಂಕಟೇಶ್​ ಭಟ್​ ಉಪಸ್ಥಿತರಿದ್ದರು.