ಜಿಲ್ಲೆ

ಒಳಮೀಸಲಾತಿಗಾಗಿ ಜೂ. 9ಕ್ಕೆ ಬೆಂಗಳೂರಿನಲ್ಲಿ ಸಮಾವೇಶ

ಹುಬ್ಬಳ್ಳಿ : ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ರಾಜ್ಯಾದ್ಯಂತ 69 ದಿನಗಳವರೆಗೆ ಹಮ್ಮಿಕೊಂಡಿರುವ ಕ್ರಾಂತಿಕಾರಿ ರಥಯಾತ್ರೆ ಏ. 21ರಂದು ಹುಬ್ಬಳ್ಳಿಗೆ ಆಗಮಿಸಿದ್ದು, ಜೂನ್​ 9ರಂದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ರಥಯಾತ್ರೆಯ ಮುಖ್ಯಸ್ಥ ಬಿ.ಆರ್​. ಭಾಸ್ಕರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಜೂನ್​ 9 ರಂದು ಬೆಂಗಳೂರಿನ ಫ್ರೀಡ್​ಂ ಪಾರ್ಕ್​ನಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಬೃಹತ್​ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಲೆ ಮಹಾದೇಶ್ವರದಿಂದ ಪ್ರಾರಂಭಗೊಂಡಿದ್ದ ಈ ರಥಯಾತ್ರೆ ಈಗಾಗಲೇ ಹಲವಾರು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಚರಿಸಿದೆ ಎಂದರು.

ಮೇ 31ರೊಳಗೆ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿತ್ತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪೂರ್ವಸಿದ್ಧತೆಗಳು ನಡೆದಿಲ್ಲ. ಒಳಮೀಸಲಾತಿ ಜಾರಿ ಸಮಿತಿ ಅಧ್ಯಕ್ಷ ನ್ಯಾಯಮೂತಿರ್ ನಾಗಮೋಹನದಾಸ್​ ಅವರು ಈ ನಿಟ್ಟಿನಲ್ಲಿ ಇದುವರೆಗೆ ಒಂದೂ ಸಭೆ ನಡೆಸಿಲ್ಲ ಎಂದು ತಿಳಿಸಿದರು.

ಈಗಾಗಲೇ ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿಗೊಳಿಸಿ, ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಬಡ್ತಿಯಿಂದ ಆಗಲಿ, ಬ್ಯಾಕಲಾಗ್​ ಹುದ್ದೆಗಳನ್ನಾಗಲಿ ತುಂಬಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಆದರೆ, ಇದೀಗ ಸರ್ಕಾರದಲ್ಲಿ ಯಾವುದೆ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿಲ್ಲ. ಬದಲಾಗಿ, ಬಡ್ತಿಯಿಂದ ಹುದ್ದೆಗಳನ್ನು ತುಂಬಿಕೊಳ್ಳಲಾಗುತ್ತಿದೆ. ಕೊಟ್ಟ ಮಾತು ತಪ್ಪಿರುವ ಮುಖ್ಯಮಂತ್ರಿ ಒಬ್ಬ ನಯವಂಚಕ ಎಂದು ಆರೋಪಿಸಿದರು.

ಬಡ್ತಿ ನೇಮಕಾತಿಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಪೊಲೀಸ್​, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಡ್ತಿಗಾಗಿ ನಡೆಯುತ್ತಿರುವ ಭ್ರಷ್ಟಾಚಾರ ಗುಟ್ಟಾಗಿ ಉಳಿದಿಲ್ಲ ಎಂದು ದೂರಿದರು.

ಬಡ್ತಿ ನೇಮಕಾತಿಯನ್ನು ಸರ್ಕಾರ ತಕ್ಷಣ ಸ್ಥಗಿತಗೊಳಿಸಬೇಕು ಹಾಗೂ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯ ಗುಂಟ್ರಾಳ, ಬಸಪ್ಪ ಮಾದರ, ಗಂಗಾದರ ಪೆರೂರ, ಮಾರುತಿ ಹಾಲಹರವಿ, ಸರಸ್ವತಿ ಕಟ್ಟಿಮನಿ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.