ಅರಕೇರಾ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವಿವಿಧ ವಸತಿ ಶಾಲೆಗಳ ಆರನೇ ತರಗತಿ ಪ್ರವೇಶ ಪರೀಕ್ಷೆಗಳನ್ನು ಆಯಾ ತಾಲೂಕುಗಳಲ್ಲಿ ನಡೆಸುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಮನವಿ ಸಲ್ಲಿಸಿತು.
ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ ಮಾತನಾಡಿ, ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪರೀಕ್ಷೆ ಸ್ಥಳದ ಆದ್ಯತಾ ಪ್ರಶ್ನೆಗೆ ಸಮೀಪದ ತಾಲೂಕನ್ನು ಆಯ್ಕೆ ಮಾಡಿರುತ್ತಾರೆ. ಆದರೆ, ಬಹುತೇಕ ಪರೀಕ್ಷಾರ್ಥಿಗಳನ್ನು ರಾಯಚೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದು, ಗೊಂದಲ ಸೃಷ್ಟಿಯಾಗಿದೆ ಎಂದು ದೂರಿದರು.
ಕ್ರೈ ಸಂಸ್ಥೆ ಸಂಚಾಲಕ ರಾಮಣ್ಣ ಎನ್.ಗಣೇಕಲ್ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ಈ ಹಿಂದೆ 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ಕೇವಲ ಐದು ಕೇಂದ್ರಗಳನ್ನು ತೆರೆಯಲಾಗಿದೆ. ಈಗ ಅಭ್ಯರ್ಥಿಗಳು ಮತ್ತು ಪಾಲಕರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ.
ವಿವಿಧ ಹಳ್ಳಿಗಳಿಗೆ ಜಿಲ್ಲಾ ಕೇಂದ್ರ ದೂರವಾಗುವುದಲ್ಲದೆ, ಪರೀಕ್ಷಾ ಕೇಂದ್ರ ಹುಡುಕಾಡಲೂ ತೊಂದರೆಯಾಗುತ್ತದೆ. ಜತೆಗೆ ಸಮಯ-ಹಣ ವೆಚ್ಚವಾಗುತ್ತದೆ. ಈ ಹಿಂದೆ ಇದ್ದಂತೆ ತಾಲೂಕು ಕೇಂದ್ರಗಳಲ್ಲೇ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ, ಪ್ರಮುಖರಾದ ಹನುಮಣ್ಣ ಗೌರ‌್ನಮೆಂಟ್, ಚನ್ನಬಸವ ನಾಗೋಲಿ ಇತರರಿದ್ದರು.