ಜಿಲ್ಲೆ

ಪಾರದರ್ಶಕವಾಗಿ ಪರೀಕ್ಷೆ ನಡೆಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾ. 21ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಅತ್ಯಂತ ಪಾರದರ್ಶಕ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣದಲ್ಲಿ ಜರುಗಬೇಕು. ಯಾವುದೇ ರೀತಿಯ ಮಾಲ್​ಪ್ರಾಕ್ಟೀಸ್​ಗೆ ಅವಕಾಶವಾಗದಂತೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸೌಕರ್ಯ, ಸಿಸಿ ಕ್ಯಾಮೆರಾ ಕಲ್ಪಿಸುವುದನ್ನು ಮೇಲಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಕೇಂದ್ರಗಳಲ್ಲಿ ವೆಬ್​ಕಾಸ್ಟಿಂಗ್​ ಕಡ್ಡಾಯವಾಗಿದ್ದು, ವೆಬ್​ಕಾಸ್ಟಿಂಗ್​ಗೆ ಅಗತ್ಯವಿರುವ ತಾಂತ್ರಿಕ ಸೌಲಭ್ಯ ಖಚಿತಪಡಿಸಿಕೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪ್ರವಾಸ ನಡೆಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ್ದು, ಯಾವುದೇ ಭಯ ಭೀತಿ ಇಲ್ಲದೆ, ಖುಷಿಯಿಂದ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳು ತಲುಪಬೇಕು. ಪರೀಕ್ಷಾ ಸಮಯದಲ್ಲಿ ಅನ್ಯ ವ್ಯಕ್ತಿಗಳು, ಸಂಬಂಧಪಡದವರು, ಮಾಧ್ಯಮಗಳಿಗೆ ಪ್ರವೇಶವಿರುವುದಿಲ್ಲ. ಕೇಂದ್ರಗಳ ಸುತ್ತ 144 ಕಲಂ ಜಾರಿ ಇರುತ್ತದೆ. ನಿಯೋಜಿತರು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದರು.

ಉಪನಿರ್ದೇಶಕ ಎಸ್​.ಎಸ್​.ಕೆಳದಿಮಠ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲೆ ಜಯಶ್ರೀ ಕಾರೇಕರ, ಸಹಾಯಕ ಪೊಲೀಸ್​ ಆಯುಕ್ತ ಪ್ರಶಾಂತ ಸಿದ್ದನಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಇತರರು ಇದ್ದರು.

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್​.ಎಂ. ಹುಡೇದಮನಿ ನಿರೂಪಿಸಿದರು.